ಪಟಿಯಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಾಗ ವಿದ್ಯುತ್ ಕಡಿತಗೊಂಡ ಘಟನೆ ನಡೆದಿದೆ. ವೈದ್ಯರು ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿದೆ.
ಚಂಡಿಗಡ್: ರೋಗಿಯೊಬ್ಬರಿಗೆ ತುರ್ತು ಶಸ್ತ್ರ ಚಿಕಿತ್ಸೆ ನೀಡುವಾಗ ಪವರ್ ಕಟ್ ಆಗಿ ವೈದ್ಯರು ಅರ್ಧಕ್ಕೆ ಶಸ್ತ್ರ ಚಿಕಿತ್ಸೆ ನಿಲ್ಲಿಸಿದ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದೆ.
ಈ ವಿಡಿಯೋ ಕ್ಲಿಕ್ ವೈದ್ಯರು ಟ್ವಿಟರ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳ ಇಂದಿನ ವಾಸ್ತವ ಸ್ಥಿತಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಿದ್ದೇನು?
ಚಂಡಿಗಢದ ಪಟಿಯಾಲ ಸರ್ಕಾರಿ ರಾಜೀಂದ್ರ ಆಸ್ಪತ್ರೆಯ ವೈದ್ಯರ ತಂಡ ಆಪರೇಷನ್ ಥಿಯೇಟರ್ ನಲ್ಲಿ ರೋಗಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆ ನಡೆಸಿತ್ತು. ಆದರೆ ಆಪರೇಷ ಮಧ್ಯೆ ದಿಢೀರ್ ಕರೆಂಟ್ ಹೋಗಿದೆ. ಇದರೊಂದಿಗೆ ಆಪರೇಷನ್ ಥಿಯೇಟರ್‌ನಲ್ಲಿನ ತುರ್ತು ದೀಪಗಳನ್ನು ಆಫ್ ಮಾಡಲಾಗಿದೆ. ಯಾವುದೇ ಬ್ಯಾಕಪ್ ಪವರ್ ಇಲ್ಲದೆ ವಿದ್ಯುತ್ ಉಪಕರಣಗಳೂ ಕೆಲಸ ಮಾಡಿಲ್ಲ. ಇದರಿಂದ ವೈದ್ಯರು ಆ ರೋಗಿಗೆ ಶಸ್ತ್ರಚಿಕಿತ್ಸೆ ನಿಲ್ಲಿಸಿದ್ದಾರೆ. ವೈದ್ಯರು ಮತ್ತೆ ವಿದ್ಯುತ್ ಬರುವುದನ್ನೇ ಕಾಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಇದನ್ನೂ ಓದಿ: ಮಹಾಕುಂಭದಲ್ಲಿ ಗಣರಾಜ್ಯೋತ್ಸವ: ಗಂಗಾ ಪಂಡಾಲ್‌ನಲ್ಲಿ ಸಾಧನಾ ಸರ್ಗಮ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ
ಆಸ್ಪತ್ರೆ ಪರಿಸ್ಥಿತಿ ಬಗ್ಗೆ ವೈದ್ಯರು ಕಳವಳ:
ರೋಗಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ತಂಡದಲ್ಲಿದ್ದ ವೈದ್ಯರು ಸರ್ಕಾರಿ ಆಸ್ಪತ್ರೆಯ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ಆ ರೋಗಿಗೆ ಏನಾದರೂ ಸಂಭವಿಸಿದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಪಂಜಾಬ್‌ನಲ್ಲಿ ಎಎಪಿ ಸರ್ಕಾರದ ವಿರುದ್ಧ ಭಾರೀ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ತೆಲಂಗಾಣ ಕಾಂಗ್ರೆಸ್ ಸರ್ಕಾರದಿಂದ ರಾಷ್ಟ್ರಧ್ವಜಕ್ಕೆ ಅವಮಾನ, ತಲೆಕೆಳಗಾದ ತ್ರಿವರ್ಣ!
ಮತ್ತೊಂದೆಡೆ, ಘಟನೆ ಬಗ್ಗೆ ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಪ್ರತಿಕ್ರಿಯಿಸಿ ಆ ಸರ್ಕಾರಿ ಆಸ್ಪತ್ರೆಯಲ್ಲಿ ಪವರ್ ಬ್ಯಾಕಪ್ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು. ಆದರೆ ವೈದ್ಯರು ಹೆದರಿ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಗೆ ಯಾವುದೇ ತೊಂದರೆಯಾಗಲಿಲ್ಲ ಎಂದು ಅವರು ಹೇಳಿದರು. ಆಸ್ಪತ್ರೆ ಸಿಬ್ಬಂದಿ ಯಾವಾಗಲೂ ರೋಗಿಗಳ ಆರೈಕೆಯತ್ತ ಗಮನ ಹರಿಸಬೇಕು ಎಂದು ಸಚಿವ ಬಲ್ಬೀರ್ ಸಿಂಗ್ ಸಲಹೆ ನೀಡಿದ್ದಾರೆ.
