ನಿನ್ನೆ 59,118 ಹೊಸ ಕೇಸ್‌| ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ 80% ಹೊಸ ಕೇಸ್‌| ನಿನ್ನೆ 257 ಮಂದಿ ಸೋಂಕಿಗೆ ಬಲಿ| ಸಕ್ರಿಯ ಕೇಸ್‌ 4.21ಲಕ್ಷಕ್ಕೆ ಏರಿಕೆ| 3 ರಾಜ್ಯಗಳಲ್ಲಿ 73% ಸಕ್ರಿಯ ಕೇಸ್‌

ನವದೆಹಲಿ(ಮಾ.27): ಭಾರತದಲ್ಲಿ 16ನೇ ದಿನವೂ ಕೊರೋನಾ ಅಬ್ಬರ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ದಾಖಲೆಯ 59,118 ಹೊಸ ಪ್ರಕರಣಗಳು ದೃಢವಾಗಿವೆ. ಇದು ಕಳೆದ ವರ್ಷ ಅ.18ರ ನಂತರದ ಮತ್ತು ಈ ವರ್ಷದ ಈವರೆಗಿನ ಗರಿಷ್ಠ ಸಂಖ್ಯೆಯಾಗಿದೆ.

ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.18 ಕೋಟಿ ದಾಟಿದೆ. ಹೊಸ ಪ್ರಕರಣಗಳ ಪೈಕಿ ಶೇ.80ರಷ್ಟುಕೇಸುಗಳು ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ, ಛತ್ತೀಸ್‌ಗಢ ಮತ್ತು ಗುಜರಾಜ್‌ ರಾಜ್ಯಗಳಿಂದ ದಾಖಲಾಗಿವೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 4,21,066ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.95.09ಕ್ಕೆ ಇಳಿಕೆಯಾಗಿದೆ.

ಇನ್ನು ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್‌ ರಾಜ್ಯಗಳಲ್ಲಿಯೇ ಶೇ.73.64ರಷ್ಟುಸಕ್ರಿಯ ಸೋಂಕಿತರಿದ್ದಾರೆ. ಅಲ್ಲದೆ ಮಹಾರಾಷ್ಟ್ರ, ಪಂಜಾಬ್‌, ಕರ್ನಾಟಕ, ಛತ್ತೀಸ್‌ಗಢ, ಗುಜರಾತ್‌, ಮಧ್ಯಪ್ರದೇಶ, ತಮಿಳುನಾಡು, ಹರಾರ‍ಯಣ ಮತ್ತು ರಾಜಸ್ಥಾನದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಆತಂಕಕಾರಿಯಾಗಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.

ಇದೇ ವೇಳೆ ಶುಕ್ರವಾರ 257 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಪೈಕಿ ಮಹಾರಾಷ್ಟ್ರದಲ್ಲಿ 111 ಮಂದಿ, ಪಂಜಾಬ್‌ನಲ್ಲಿ 43, ಛತ್ತೀಸ್‌ಗಢದಲ್ಲಿ 15, ಕೇರಳದಲ್ಲಿ 12, ತಮಿಳುನಾಡಿನಲ್ಲಿ 11 ಮತ್ತು ಕರ್ನಾಟಕದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 1,60,949ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 1.12 ಕೋಟಿ ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.