ಅತುಲ್ ಸುಭಾಷ್ ಸಾವಿನ ಬೆನ್ನಲ್ಲೇ, ವರದಕ್ಷಿಣೆ ಕೇಸ್‌ಗಳ ಬಗ್ಗೆ ಸುಪ್ರೀಂ ಕೋರ್ಟ್ ಖಡಕ್ ಮಾತು!
ಪುರುಷ ಹಾಗೂ ಆತನ ಸಂಬಂಧಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್‌ಅನ್ನು ವಜಾಗೊಳಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ನವದೆಹಲಿ (ಡಿ.11): ತಮ್ಮ ಅತ್ತೆ-ಮಾವ ಹಾಗೂ ಪತಿಯಿಂದ ವರದಕ್ಷಿಣೆ ಕಿರುಕುಳದಿಂದ ರಕ್ಷಿಸಲು ಇರುವ ಕಾನೂನುಗಳನ್ನು ಮಹಿಳೆಯರು ದುರುಪಯೋಗ ಮಾಡಿಕೊಳ್ಳುವ ಪ್ರವೃತ್ತಿ ದೇಶದಲ್ಲಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಿರ್ಧಾರ ಮಾಡುವಾಗ ಮುಗ್ಧ ಜನರಿಗೆ ಅನಗತ್ಯ ಕಿರುಕುಳವಾಗದಂತೆ ತಡೆಯಲು ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂದು ದೇಶದ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಬೆಂಗಳೂರಿನ ಮಾರತಹಳ್ಳಿಯಲ್ಲಿ ಉತ್ತರ ಪ್ರದೇಶ ಮೂಲದ 34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಯ ಬಗ್ಗೆ ದೇಶದಲ್ಲಿ ಚರ್ಚೆ ಆಗುತ್ತಿರುವ ನಡುವೆಯೇ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅತುಲ್ ಸುಭಾಷ್ 80 ನಿಮಿಷದ ಗಳ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಲ್ಲದೆ, 24 ಪುಟಗಳ ಡೆತ್ ನೋಟ್ ಕೂಡ ಬರೆದಿದ್ದಾನೆ. ಇದರಲ್ಲಿ 4 ಪುಟ ಕೈಬರಹದಲ್ಲಿದ್ದರೆ, ಉಳಿದವನ್ನು ಟೈಪ್ ಮಾಡಿದ್ದಾರೆ. ಇದರಲ್ಲಿ ಆತನ ಪತ್ನಿ ನಿಖಿತಾ ಸಿಂಘಾನಿಯಾ ತನ್ನ ಮೇಲೆ ಹಾಕಿರುವ 9 ಸುಳ್ಳು ಕೇಸ್‌ಗಳು, ನಿಖಿತಾ ಕುಟುಂಬ ತಮ್ಮನ್ನು ಹಣಕ್ಕಾಗಿ ಸುಲಿಗೆ ಮಾಡುತ್ತಿದ್ದ ರೀತಿಯ ಬಗ್ಗೆ ತಿಳಿಸಿದ್ದ ಅತುಲ್, ದೇಶದ ನ್ಯಾಯಾಂಗ ವ್ಯವಸ್ಥೆಯನ್ನೂ ಟೀಕಿಸಿದ್ದರು.
ತೆಲಂಗಾಣ ಹೈಕೋರ್ಟ್ ಪುರುಷ, ಆತನ ಕುಟುಂಬ ಹಾಗೂ ಇತರ ಸದಸ್ಯರ ಮೇಲೆ ಹಾಕಲಾಗಿದ್ದ ವರದಕ್ಷಿಣೆ ಕಿರುಕುಳ ಕೇಸ್‌ಅನ್ನು ರದ್ದು ಮಾಡಲು ನಿರಾಕರಿಸಿದ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ನಾವು ಎಫ್‌ಐಆರ್‌ಅನ್ನು ಪರಿಶೀಲನೆ ಮಾಡಿದ್ದೇವೆ. ಆತನ ಪತ್ನಿ ಮಾಡಿರುವ ಆರೋಪಗಳು ಅಸ್ಪಷ್ಟವಾಗಿವೆ. ಆಕೆ ಮಾಡಿರುವ ಕೆಲವು ಆರೋಪಗಳು, ಆರೋಪಿಗೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ಯಾವುದೇ ಕಾರಣವಿಲ್ಲದೆ, ಅಪರಾಧದ ಜಾಲಕ್ಕೆ ಇವರನ್ನು ಎಳೆಯಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವೈವಾಹಿಕ ವೈಷಮ್ಯದಿಂದ ಕೌಟುಂಬಿಕ ಕಲಹಗಳು ಉಂಟಾದಾಗ ಪತಿಯ ಕುಟುಂಬದ ಎಲ್ಲ ಸದಸ್ಯರನ್ನು ಆರೋಪಿಸುವಂತಹ ಪ್ರವೃತ್ತಿಯು ಹೆಚ್ಚಾಗಿ ಕಂಡುಬರುತ್ತದೆ ಎಂಬುದು ನ್ಯಾಯಾಂಗದ ಅನುಭವವಾಗಿದೆ. ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲದ ಇಂತಹ ವ್ಯಾಪಕ ಆರೋಪಗಳು ಪ್ರಾಸಿಕ್ಯೂಷನ್‌ಗೆ ಆಧಾರವಾಗುವುದಿಲ್ಲ ಎಂದು ಸೂಚಿಸಿದ ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ತನ್ನ ಆದೇಶದಲ್ಲಿ, "ಕಾನೂನು ನಿಬಂಧನೆಗಳು ಮತ್ತು ಕಾನೂನು ಪ್ರಕ್ರಿಯೆಯ ದುರುಪಯೋಗವನ್ನು ತಡೆಯಲು ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಎಚ್ಚರಿಕೆ ವಹಿಸಬೇಕು. ಮತ್ತು ಅಮಾಯಕ ಕುಟುಂಬ ಸದಸ್ಯರ ಅನಗತ್ಯ ಕಿರುಕುಳವನ್ನು ತಪ್ಪಿಸಬೇಕು' ಎಂದು ತಿಳಿಸಿದೆ.
Justice is Due ಎಂದು ಬರೆದು ಸಾವಿಗೆ ಶರಣಾದ ಯುವಕನ 12 ಕೊನೆಯ ಆಸೆ, ಈಡೇರಿಸುತ್ತಾ ನಮ್ಮ ಸಮಾಜ?
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ, ಮಹಿಳೆಯ ವಿರುದ್ಧ ಆಕೆಯ ಪತಿ ಅಥವಾ ಅವನ ಸಂಬಂಧಿಕರಿಂದ ಕ್ರೌರ್ಯವನ್ನು ಶಿಕ್ಷಿಸುತ್ತದೆ. ಈ ಬಗ್ಗೆ ಸರ್ಕಾರಗಳು ತ್ವರಿತವಾಗಿ ಕೆಲಸ ಮಾಡಬೇಕು ಅನ್ನೋದನ್ನು ಕಾನೂನುಗೆ ಅಳವಡಿಸಲಾಗಿದೆ ಎಂದು ಕೋರ್ಟ್ ಹೇಳಿದೆ. ಭಾರತೀಯ ನ್ಯಾಯ ಸಂಹಿತಾದಿಂದ IPC ಬದಲಿಗೆ, ಸೆಕ್ಷನ್ 80 ಈಗ ವರದಕ್ಷಿಣೆ ಸಾವಿನ ಬಗ್ಗೆ ಮತ್ತು ಸೆಕ್ಷನ್ 85 ಮಹಿಳೆಯ ಮೇಲೆ ಅವಳ ಪತಿ ಅಥವಾ ಅವನ ಸಂಬಂಧಿಕರಿಂದ ಕ್ರೌರ್ಯವನ್ನು ಎದುರಿಸುತ್ತದೆ.
ಬೆಂಗಳೂರಿನಲ್ಲಿ ಉತ್ತರ ಭಾರತದ ಟೆಕ್ಕಿಯ ದುರಂತ ಅಂತ್ಯ; ಹೆಂಡತಿಯ ಕರಾಳತೆ ಬಿಚ್ಚಿಟ್ಟ ಡೆತ್ ನೋಟ್!
ಇತ್ತೀಚಿನ ದಿನಗಳಲ್ಲಿ ವೈವಾಹಿಕ ವಿವಾದಗಳಲ್ಲಿ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಪತ್ನಿಯು, ಪತಿ ಮತ್ತು ಅವನ ಕುಟುಂಬದ ವಿರುದ್ಧ ವೈಯಕ್ತಿಕ ದ್ವೇಷವನ್ನು ಹೊರಹಾಕುವ ಸಾಧವನಾಗಿ ಐಪಿಸಿ ಸೆಕ್ಷನ್ 498Aನಂಥ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಹೇಳಿದೆ.