ನವದೆಹಲಿ(ಮಾ.07): ಕೊರೋನಾ ವೈರಸ್‌ನಿಂದಾಗಿ ಕಳೆದ ವರ್ಷದ ಮಾಚ್‌ರ್‍ನಿಂದ ಕೇವಲ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತ್ರ ವಿಚಾರಣೆಗಳು ನಡೆಯುತ್ತಿದ್ದ ಸುಪ್ರೀಂಕೋರ್ಟ್‌ನಲ್ಲಿ ಮಾ.15ರಿಂದ ಭೌತಿಕ ಕಲಾಪಗಳು ಮತ್ತೆ ಆರಂಭವಾಗಲಿವೆ. ಆದರೆ, ಅದು ಹೈಬ್ರಿಡ್‌ ಮಾದರಿಯಲ್ಲಿರಲಿದೆ. ಅಂದರೆ, ಕೆಲ ದಿನ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ಹಾಗೂ ಇನ್ನು ಕೆಲ ದಿನ ಭೌತಿಕ ಕಲಾಪಗಳು ನಡೆಯಲಿವೆ.

ಭೌತಿಕ ಕಲಾಪ ಪುನಾರಂಭಿಸಲು ಶನಿವಾರ ಸುಪ್ರೀಂಕೋರ್ಟ್‌ ನಿಯಮಾವಳಿ ಬಿಡುಗಡೆ ಮಾಡಿದೆ. ಅದರನ್ವಯ, ಮಾ.15ರಿಂದ ಪ್ರಾಯೋಗಿಕವಾಗಿ ಹೈಬ್ರಿಡ್‌ ಕಲಾಪ ಆರಂಭಿಸಲಾಗುತ್ತದೆ. ಯಾವ ವಿಚಾರಣೆ ಕೋರ್ಟ್‌ನಲ್ಲಿ ನಡೆಯಬೇಕು ಮತ್ತು ಯಾವ ವಿಚಾರಣೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆಯಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಆಯಾ ಪೀಠಗಳಿಗೆ ಬಿಡಲಾಗಿದೆ. ಮಂಗಳವಾರ, ಬುಧವಾರ ಹಾಗೂ ಗುರುವಾರ ಅಂತಿಮ ವಿಚಾರಣೆಯ/ಸಾಮಾನ್ಯ ಕೇಸುಗಳನ್ನು ಹೈಬ್ರಿಡ್‌ ಮಾದರಿಯಲ್ಲಿ ನಡೆಸಬೇಕು ಎಂದು ಸೂಚಿಸಲಾಗಿದೆ. ಪ್ರಕರಣದಲ್ಲಿರುವ ಕಕ್ಷೀದಾರರ ಸಂಖ್ಯೆ, ಕೋರ್ಟ್‌ ರೂಮ್‌ನ ಗಾತ್ರ ಮುಂತಾದವುಗಳನ್ನು ಗಮನಿಸಿ ಕಲಾಪ ಹೇಗೆ ನಡೆಯಬೇಕು ಎಂಬುದನ್ನು ಜಡ್ಜ್‌ ನಿರ್ಧರಿಸಬಹುದು. ಇನ್ನೆಲ್ಲಾ ರೀತಿಯ ಪ್ರಕರಣಗಳು ಹಾಗೂ ಸೋಮವಾರ ಮತ್ತು ಶುಕ್ರವಾರ ವಿಚಾರಣೆಗೆ ನಿಗದಿಯಾಗುವ ಪ್ರಕರಣಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯಬೇಕು ಎಂದು ಸೂಚಿಸಲಾಗಿದೆ.

ಕಳೆದ ವರ್ಷದ ಮಾಚ್‌ರ್‍ನಲ್ಲಿ ಕೊರೋನಾ ಹರಡತೊಡಗಿದ ನಂತರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತ್ರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗಳು ನಡೆಯುತ್ತಿದ್ದವು. ಹೈಕೋರ್ಟ್‌ ಹಾಗೂ ಅಧೀನ ಕೋರ್ಟ್‌ಗಳಲ್ಲಿ ಕೆಲ ತಿಂಗಳ ಹಿಂದಿನಿಂದಲೇ ಭೌತಿಕ ಕಲಾಪಗಳು ಆರಂಭವಾಗಿವೆ. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲೂ ಕೂಡಲೇ ಭೌತಿಕ ಕಲಾಪ ಆರಂಭಿಸಬೇಕೆಂದು ವಕೀಲರ ಸಂಘಗಳು ಒತ್ತಾಯಿಸಿದ್ದವು. ಅದರಂತೆ ಭೌತಿಕ ಕಲಾಪ ಆರಂಭಿಸಲಾಗುತ್ತಿದೆ.

ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಳ್ಳುವ ವಕೀಲರು ಹಾಗೂ ಕಕ್ಷೀದಾರರ ಸಂಖ್ಯೆ 20ಕ್ಕಿಂತ ಹೆಚ್ಚಿದ್ದರೆ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲೇ ನಡೆಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಭೌತಿಕವಾಗಿ ವಿಚಾರಣೆ ನಡೆಯಬೇಕು ಎಂದು ಜಡ್ಜ್‌ಗೆ ಅನ್ನಿಸಿದರೆ ಭೌತಿಕ ವಿಚಾರಣೆ ನಡೆಸಲು ಅವರಿಗೆ ಅಧಿಕಾರ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಪಡದವರಿಗೆ ಕೋರ್ಟ್‌ ರೂಮ್‌ಗೆ ಪ್ರವೇಶ ನೀಡಬಾರದು, ಪ್ರಕರಣದ ವಿಚಾರಣೆ ಶುರುವಾಗುವುದಕ್ಕಿಂತ 10 ನಿಮಿಷಕ್ಕಿಂತ ಮೊದಲು ಅದಕ್ಕೆ ಸಂಬಂಧಪಟ್ಟವರನ್ನು ಒಳಗೆ ಬಿಡಬಾರದು ಎಂದು ಸೂಚಿಸಲಾಗಿದೆ.