ನಾಳೆ(ನ.14)ರಫೆಲ್ ಒಪ್ಪಂದದ ಮರುಪರಿಶೀಲನಾ ಅರ್ಜಿಯ ತೀರ್ಪು/ ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದ ವಿಪಕ್ಷ ಕಾಂಗ್ರೆಸ್/ ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಪ್ರತಿಪಕ್ಷ ಕಾಂಗ್ರೆಸ್/
ನವದೆಹಲಿ(ನ.13): ಭಾರೀ ಕುತೂಹಲ ಕೆರಳಿಸಿದ್ದ ರಫೆಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ನಾಳೆ(ನ.14) ಸುಪ್ರೀಂಕೋರ್ಟ್ ಪ್ರಕಟಿಸಲಿದೆ.
ರಫೆಲ್ ಒಪ್ಪಂದದಲ್ಲಿ ಮೋದಿ ನೇತೃತ್ವದ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಅಲ್ಲದೇ ಈ ಕುರಿತು ವಿಚಾರಣೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಈ ಹಿಂದೆ 2007 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ 126 ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್‌ನ ಡಸಾಲ್ಟ್ ಕಂಪನಿಗೆ 54,000 ಕೋಟಿ ರೂ. ನೀಡುವ ಒಪ್ಪಂದವಾಗಿತ್ತು. ಡಸಾಲ್ಟ್ ಕಂಪನಿ ಹಾರಾಟಕ್ಕೆ ಸಿದ್ಧವಿರುವ 18 ವಿಮಾನಗಳನ್ನು ಭಾರತಕ್ಕೆ ಒದಗಿಸಿ ಉಳಿದ ಯುದ್ಧ ವಿಮಾನಗಳನ್ನು ಭಾರತದಲ್ಲೇ ತಯಾರಿಸಲು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿ ಟೆಡ್ ಕಂಪನಿಗೆ ತಾಂತ್ರಿಕ ನೆರವು ನೀಡುವುದೆಂದು ಒಪ್ಪಂದವಾಗಿತ್ತು.
ಆದರೆ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 2016 ರಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ 36 ಯುದ್ಧ ವಿಮಾನಗಳನ್ನು 59,000 ಕೋಟಿ ರೂ. ನೀಡಿ ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು.
ರಫೆಲ್ ಮರುಪರಿಶೀಲನಾ ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ!
ಅಲ್ಲದೇ ಯುಪಿಎ ಸರ್ಕಾರ ಪ್ರತಿ ವಿಮಾನವನ್ನು 526 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ನಿರ್ಧರಿಸಿದ್ದರೆ, ಎನ್‌ಡಿಎ ಸರ್ಕಾರ ಅದೇ ವಿಮಾನಕ್ಕೆ 1,555 ಕೋಟಿ ರೂ. ಪಾವತಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಈ ಆರೋಪ ಸಂಸತ್ತಿನಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತು. ಒಪ್ಪಂದದ ಕುರಿತ ವರದಿಯನ್ನು ಬಹಿರಂಗಪಡಿಸುವಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.
ಕೇಂದ್ರ ಸರ್ಕಾರ ಈ ಬೇಡಿಕೆಗೆ ಒಪ್ಪದ ಕಾರಣ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಒಪ್ಪಂದದಲ್ಲಿ ಹಗರಣ ನಡೆದಿದ್ದನ್ನು ಸ್ಪಷ್ಟವಾಗಿ ತಳ್ಳಿ ಹಾಕಿತ್ತು.
ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತೆ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ನಾಳೆ ಈ ಅರ್ಜಿಯ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಲಿದೆ.
