ನವದೆಹಲಿ(ಜ.09): ಅರಣ್ಯ ರಕ್ಷಣಾ ಸಿಬ್ಬಂದಿ ಮೇಲೆ ಕಳ್ಳಸಾಗಣೆದಾರರು ಹಾಗೂ ಡಕಾಯಿತರು ನಡೆಸುತ್ತಿರುವ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ‘ಸಶಸ್ತ್ರ ಡಕಾಯಿತರ ವಿರುದ್ಧ ನಿಶ್ಶಸ್ತ್ರ ಅರಣ್ಯ ಸಿಬ್ಬಂದಿ ಹೇಗೆ ಹೋರಾಡಲು ಸಾಧ್ಯ? ಇದನ್ನು ಊಹಿಸಿಕೊಳ್ಳಲೂ ಅಸಾಧ್ಯ’ ಎಂದು ಪ್ರಶ್ನಿಸಿದೆ. ಅಲ್ಲದೆ, ‘ಕರ್ನಾಟಕದಲ್ಲಿ ಅರಣ್ಯಾಧಿಕಾರಿಗಳು ಕೇವಲ ‘ಚಪ್ಪಲಿ’ ಧರಿಸಿ ಓಡಾಡುತ್ತಿದ್ದು, ಅವರ ಮೇಲೆ ಅರಣ್ಯಗಳ್ಳರು ದಾಳಿ ನಡೆಸುತ್ತಿದ್ದಾರೆæ’ ಎಂದು ಬೇಸರ ವ್ಯಕ್ತಪಡಿಸಿದೆ. ಹೀಗಾಗಿ, ‘ಅರಣ್ಯ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರಗಳು, ಗುಂಡು ನಿರೋಧಕ ಕವಚ ಹಾಗೂ ಹೆಲ್ಮೆಟ್‌ಗಳನ್ನು ಒದಗಿಸುವ ಆದೇಶ ಹೊರಡಿಸಬೇಕಾಗಬಹುದು’ ಎಂದು ಹೇಳಿದೆ.

ಅರಣ್ಯಗಳ್ಳತನಕ್ಕೆ ಸಂಬಂಧಿಸಿದ 25 ವರ್ಷ ಹಳೆಯದಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪೀಠವು (ಪಿಐಎಲ್‌) ವಿಚಾರಣೆ ನಡೆಸುತ್ತಿರುವ ವೇಳೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿನ ಫಾರೆಸ್ಟ್‌ ರೇಂಜರ್‌ಗಳ ಮೇಲೆ ನಡೆದ ಮಾರಣಾಂತಿಕ ದಾಳಿಯ ಬಗ್ಗೆ ವಕೀಲರು ಪ್ರಸ್ತಾಪಿಸಿದರು. ಆಗ ಈ ಮೇಲಿನಂತೆ ಹೇಳಿದ ನ್ಯಾ

ಎಸ್‌.ಎ. ಬೋಬ್ಡೆ ಅವರ ಪೀಠ, ‘ಅರಣ್ಯಗಳ್ಳತನದ ಮೂಲಕ ಲಕ್ಷಾಂತರ ಡಾಲರ್‌ ಲೂಟಿ ಮಾಡಲಾಗುತ್ತಿದೆ. ಜಾರಿ ನಿರ್ದೇಶನಾಲಯದಲ್ಲಿ (ಇ.ಡಿ.) ವನ್ಯಜೀವಿ ಘಟಕ ಸೃಷ್ಟಿಸಬೇಕು’ ಎಂದೂ ಅಭಿಪ್ರಾಯಪಟ್ಟಿತು.

‘ಅರಣ್ಯ ಸಿಬ್ಬಂದಿಗೆ ಅಸ್ಸಾಂನಲ್ಲಿ ಬಂದೂಕು ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಕೇವಲ ಲಾಠಿ ಕೊಟ್ಟಿದ್ದಾರೆ. ನಾನು ಕಳೆದ ತಿಂಗಳು ಮಹಾರಾಷ್ಟ್ರದ ಅರಣ್ಯಕ್ಕೆ ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ಬಳಿ ಶಸ್ತ್ರಾಸ್ತ್ರ ಇಲ್ಲದ್ದನ್ನು ನೋಡಿದ್ದೇನೆ. ಇನ್ನು ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಅರಣ್ಯಾಧಿಕಾರಿಗಳು ಬರೀ ‘ಚಪ್ಪಲಿ’ ಧರಿಸಿ ಓಡಾಡುತ್ತಿದ್ದು, ಅವರ ಮೇಲೆ ಅರಣ್ಯಗಳ್ಳರು ಹಲ್ಲೆ ನಡೆಸುತ್ತಿದ್ದಾರೆ. ನಾವು ಅರಣ್ಯ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಇವರಿಗೆ ಶಸ್ತ್ರಾಸ್ತ್ರಗಳು, ಗುಂಡು ನಿರೋಧಕ ಕವಚ ಹಾಗೂ ಹೆಲ್ಮೆಟ್‌ಗಳನ್ನು ನೀಡಬೇಕು ಎಂದು ಸೂಚಿಸುತ್ತೇವೆ. ಸರ್ಕಾರಿ ವಕೀಲರು ಈ ಪ್ರಕರಣದಲ್ಲಿ ಮುಂದಿನ ವಿಚಾರಣೆ ವೇಳೆ ಉತ್ತರ ನೀಡಬೇಕು. ಬಳಿಕ ಅಂತಿಮ ಆದೇಶ ಹೊರಡಿಸುತ್ತೇವೆ’ ಎಂದು ನ್ಯಾ| ಬೋಬ್ಡೆ ಹೇಳಿದರು.

‘ಊರುಗಳಲ್ಲಿ ದಾಳಿ ನಡೆದರೆ ಪೊಲೀಸರನ್ನು ಕರೆಸಲಾಗುತ್ತದೆ. ಆದರೆ ಅರಣ್ಯದಲ್ಲಿ ದಾಳಿ ನಡೆದರೆ ರಕ್ಷಣೆಗೆ ಕೋರಲು ಕೂಡ ಸಿಬ್ಬಂದಿಗೆ ಆಗುವುದಿಲ್ಲ’ ಎಂದು ಕಳವಳ ವ್ಯಕ್ತಪಡಿದರು.

‘ಅರಣ್ಯಾಧಿಕಾರಿಗಳ ಮೇಲೆ ವಿವಿಧ ರಾಜ್ಯಗಳಲ್ಲಿ ಯಾವ ರೀತಿ ದಾಳಿಗಳು ನಡೆದಿವೆ ಎಂಬುದನ್ನು ದಾಖಲು ಮಾಡಿಕೊಂಡಿದ್ದೇವೆ. ಆದರೆ ಅರಣ್ಯ ಸಿಬ್ಬಂದಿಯ ಮೇಲೇ ಪ್ರತಿದೂರು ನೀಡಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬುದೂ ನಮ್ಮ ಗಮನಕ್ಕೆ ಬಂದಿದೆ’ ಎಂದು ಪೀಠ ಹೇಳಿತು. ಬಳಿಕ 4 ವಾರ ಕಾಲ ವಿಚಾರಣೆ ಮುಂದೂಡಿ, ಎಲ್ಲ ವಕೀಲರ ಹೇಳಿಕೆ ಪಡೆದ ಬಳಿಕ ಅಂತಿಮ ಆದೇಶ ಹೊರಡಿಸುವುದಾಗಿ ಹೇಳಿತು.

ಸುಪ್ರೀಂ ಹೇಳಿದ್ದು

- ಕರ್ನಾಟಕ, ತಮಿಳುನಾಡಲ್ಲಿ ಅರಣ್ಯ ಸಿಬ್ಬಂದಿಗೆ ಸೂಕ್ತ ರಕ್ಷಣೆ ಇಲ್ಲ

- ನಿಶ್ಶಸ್ತ್ರ ಅರಣ್ಯ ಸಿಬ್ಬಂದಿ ಮೇಲೆ ಕಾಡುಗಳ್ಳರು ದಾಳಿ ನಡೆಸುತ್ತಿದ್ದಾರೆ

- ಸಿಬ್ಬಂದಿ ಆತ್ಮರಕ್ಷಣೆಗೆ ಶಸ್ತ್ರಾಸ್ತ್ರ, ಗುಂಡು ನಿರೋಧ ಕವಚ ಹಾಗೂ ಹೆಲ್ಮೆಟ್‌ಗಳನ್ನು ಒದಗಿಸುವ ಬಗ್ಗೆ ಆದೇಶ ಹೊರಡಿಸುತ್ತೇವೆ

- 25 ವರ್ಷ ಹಿಂದಿನ ಪಿಐಎಲ್‌ ವಿಚಾರಣೆ ವೇಳೆ ಸುಪ್ರೀಂ ಹೇಳಿಕೆ