Asianet Suvarna News Asianet Suvarna News

ಕಟಕಟೆಯಲ್ಲಿ ಚುನಾವಣಾಧಿಕಾರಿ ನಿಲ್ಲಿಸಿ ಸುಪ್ರೀಂಕೋರ್ಟ್‌ ಛೀಮಾರಿ: ಇತಿಹಾಸದಲ್ಲೇ ಇದೇ ಮೊದಲು

ಚಂಡೀಗಢ ಮೇಯರ್‌ ಚುನಾವಣೆ ವೇಳೆ ಮತ ಪತ್ರಗಳನ್ನು ತಿರುಚಿದ ಆರೋಪ ಎದುರಿಸುತ್ತಿರುವ ಚುನಾವಣಾಧಿಕಾರಿ ಅನಿಲ್‌ ಮಸಿಹ್‌ ಸೋಮವಾರ ಸರ್ವೋಚ್ಚ ನ್ಯಾಯಾಲಯ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ಅವರಿಗೆ ನ್ಯಾಯಾಲಯ ಛೀಮಾರಿ ಹಾಕಿತು.

Supreme Court slams Election Officer Anil Masih who is facing charges of tampering with ballot papers during the Chandigarh mayor election akb
Author
First Published Feb 20, 2024, 7:08 AM IST

ಪಿಟಿಐ ನವದೆಹಲಿ: ಚಂಡೀಗಢ ಮೇಯರ್‌ ಚುನಾವಣೆ ವೇಳೆ ಮತ ಪತ್ರಗಳನ್ನು ತಿರುಚಿದ ಆರೋಪ ಎದುರಿಸುತ್ತಿರುವ ಚುನಾವಣಾಧಿಕಾರಿ ಅನಿಲ್‌ ಮಸಿಹ್‌ ಸೋಮವಾರ ಸರ್ವೋಚ್ಚ ನ್ಯಾಯಾಲಯ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ಅವರಿಗೆ ನ್ಯಾಯಾಲಯ ಛೀಮಾರಿ ಹಾಕಿತು. ಚುನಾವಣಾಧಿಕಾರಿಯೊಬ್ಬರನ್ನು ಕಟಕಟೆಯಲ್ಲಿ ನಿಲ್ಲಿಸಿ ಸುಪ್ರೀಂಕೋರ್ಟ್‌ ಛೀಮಾರಿ ಹಾಕಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು.

ಚಂಡೀಗಢ ಮೇಯರ್‌ ಚುನಾವಣೆಗೆ ಸಂಬಂಧಿಸಿದ ಎಲ್ಲ ಮತಪತ್ರಗಳು ಹಾಗೂ ಮತ ಎಣಿಕೆಯ ಸಂಪೂರ್ಣ ವಿಡಿಯೋ ಅನ್ನು ಮಂಗಳವಾರ ಹಾಜರುಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿತು. ಇದಕ್ಕಾಗಿ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕು, ಅವರಿಗೆ ಸೂಕ್ತ ರಕ್ಷಣೆ ಕೊಡಬೇಕು ಪಂಜಾಬ್‌ ಹಾಗೂ ಹರ್ಯಾಣ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿತು.

ಚಂಡೀಘಡ ಮೇಯರ್ ಚುನಾವಣೆ ಗೆದ್ದ ಬಿಜೆಪಿ, ಇಂಡಿಯಾ ಮೈತ್ರಿಗೆ ಮೊದಲ ಸೋಲು!

ಇದೇ ವೇಳೆ ಮತಪತ್ರ ತಿರುಚಿದ ಆರೋಪ ಎದುರಿಸುತ್ತಿರುವ ಅನಿಲ್‌ ಮಸಿಹ್‌ ಅವರನ್ನು ಪ್ರಶ್ನಿಸಿ ಕೋರ್ಟ್‌ ತರಾಟೆಗೆ ತೆಗದುಕೊಂಡಿತು. ಮತಪತ್ರ ತಿರುಚಿದ ಸಂಬಂಧ ಅನಿಲ್‌ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಗುಡುಗಿತು. ಈ ಮಧ್ಯೆ, ಮತಪತ್ರದ ಮೇಲೆ ಏಕೆ ಎಕ್ಸ್‌ ಎಂದು ಬರೆದಿರಿ ಎಂದು ನ್ಯಾಯಾಧೀಶರು ಕೇಳಿದರು. ಅದಕ್ಕೆ ಉತ್ತರಿಸಿದ ಮಸಿಹ್‌, 8 ಮತಪತ್ರಗಳು ಅದಾಗಲೇ ಕುಲಗೆಟ್ಟಿದ್ದವು. ಅವನ್ನು ಪ್ರತ್ಯೇಕವಾಗಿಡಲು ಎಕ್ಸ್ ಎಂದು ಬರೆದೆ. ಆಪ್‌ ಸದಸ್ಯರು ಗದ್ದಲ ಸೃಷ್ಟಿಸಿದ್ದರು. ಮತಪತ್ರಗಳನ್ನು ಕಸಿಯಲು ಯತ್ನಿಸಿದರು. ಹೀಗಾಗಿ ನಾನು ಸಿಸಿಟೀವಿಯತ್ತ ನೋಡಬೇಕಾಯಿತು ಎಂದು ಸಮರ್ಥನೆ ನೀಡಿದರು.

ಅದಕ್ಕೆ ತಿರುಗೇಟು ನೀಡಿದ ನ್ಯಾಯಾಲಯ, ಮತಪತ್ರಗಳ ಮೇಲೆ ಸಹಿ ಮಾಡಲು ಮಾತ್ರವೇ ಅವಕಾಶವಿದೆ. ಬೇರೆ ಚಿಹ್ನೆಗಳನ್ನು ಬರೆಯಬಹುದು ಎಂದು ಯಾವ ನಿಯಮ ನಿಮಗೆ ಹೇಳುತ್ತದೆ ಎಂದು ಕಿಡಿಕಾರಿತು.

Mayor election Result ಚಂಡೀಘಡದಲ್ಲಿ ಆಪ್‌ಗೆ ಹಿನ್ನಡೆ, 1 ಮತದಿಂದ ಬಿಜೆಪಿಗೆ ಗೆಲುವು!

ಏನಿದು ಪ್ರಕರಣ?:

ಚಂಡೀಗಢ ಮೇಯರ್‌ ಸ್ಥಾನಕ್ಕೆ ಜ.30ರಂದು ಚುನಾವಣೆ ನಡೆದಿತ್ತು. ಆಪ್‌- ಕಾಂಗ್ರೆಸ್‌ಗೆ ಹೆಚ್ಚಿನ ಸದಸ್ಯರ ಬೆಂಬಲವಿದ್ದರೂ ಬಿಜೆಪಿ ಅಭ್ಯರ್ಥಿ ಜಯಿಸಿದ್ದರು. 8 ಮತಗಳು ಕುಲಗೆಟ್ಟಿವೆ ಎಂದು ಚುನಾವಣಾಧಿಕಾರಿ ಆದೇಶಿಸಿದ್ದರು. ಆದರೆ ಚುನಾವಣಾಧಿಕಾರಿ ಆಪ್‌ ಮತಪತ್ರಗಳ ಮೇಲೆ ಎಕ್ಸ್‌ ಎಂದು ಬರೆಯುತ್ತಿರುವುದು ಸಿಸಿಟೀವಿಯಲ್ಲಿ ದಾಖಲಾಗಿತ್ತು. ಚುನಾವಣಾಧಿಕಾರಿಯೇ ಮತಪತ್ರ ಕುಲಗೆಡಿಸಿದ್ದಾರೆ ಎಂದ ಆಪ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಫೆ.5ರಂದು ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಪ್ರಜಾಪ್ರಭುತ್ವದ ಅಣಕ, ಚುನಾವಣಾಧಿಕಾರಿಯ ಈ ಕೃತ್ಯ ಕೊಲೆಗೆ ಸಮ ಎಂದು ಟೀಕಿಸಿತ್ತಲ್ಲದೆ, ನ್ಯಾಯಾಲಯಕ್ಕೆ ಹಾಜರಾಗಲು ಚುನಾವಣಾಧಿಕಾರಿಗೆ ತಾಕೀತು ಮಾಡಿತ್ತು.

Follow Us:
Download App:
  • android
  • ios