ನವದೆಹಲಿ(ಆ.28):  ಮೊಹರಂ ಮೆರವಣಿಗೆಗೆ ದೇಶವ್ಯಾಪಿ ಅನುಮತಿ ನೀಡಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದೆ. ಈ ಸಂಬಂಧ ಅರ್ಜಿ ಸಲ್ಲಿಸಿದ್ದ ಲಖನೌ ಮೂಲದ ಅರ್ಜಿದಾರ, ಶಿಯಾ ಮುಖಂಡ ಸಯ್ಯದ್‌ ಕಲ್ಬೆ ಜವಾದ್‌ ಅವರಿಗೆ ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಲು ಸೂಚಿಸಿದೆ.

‘ನೀವು (ಅರ್ಜಿದಾರರು) ಇಡೀ ದೇಶದಲ್ಲಿ ಮೆರವಣಿಗೆಗೆ ಅನುಮತಿಸಲು ಆದೇಶಿಸುವಂತೆ ನಮಗೆ ಕೋರಿದ್ದೀರಿ. ಇಡೀ ದೇಶಕ್ಕೆ ಅನ್ವಯವಾಗುವಂತೆ ನಾವು ಮೆರವಣಿಗೆಗೆ ಅನುಮತಿಸಿದರೆ ಭಾರೀ ಕೋಲಾಹಲವೇ ಸೃಷ್ಟಿಯಾಗುತ್ತದೆ. ಒಂದು ನಿರ್ದಿಷ್ಟ ಸಮುದಾಯವು ಕೊರೋನಾ ಹರಡಲು ಕಾರಣವಾಯಿತು ಎಂಬ ದೂಷಣೆ ಆರಂಭವಾಗುತ್ತದೆ. ಹೀಗಾಗಿ ಇದನ್ನು ನಾವು ಬಯಸುವುದಿಲ್ಲ. ನಾವು ಒಂದು ನ್ಯಾಯಾಲಯವಾಗಿ ಜನರ ಆರೋಗ್ಯವನ್ನು ಅಪಾಯದಲ್ಲಿ ಇಡಲು ಬಯಸುವುದಿಲ್ಲ’ ಎಂದು ಮುಖ್ಯ ನ್ಯಾಯಾಧೀಶ ನ್ಯಾ ಎಸ್‌.ಎ. ಬೋಬ್ಡೆ, ನ್ಯಾ ಎ.ಎಸ್‌. ಬೋಪಣ್ಣ ಹಾಗೂ ನ್ಯಾ ವಿ. ರಾಮಸುಬ್ರಮಣಿಯನ್‌ ಅವರಿದ್ದ ಪೀಠ ಹೇಳಿತು.

ರಾಯಣ್ಣ- ಶಿವಾಜಿ ಪ್ರತಿಮೆ ವಿವಾದ; ಪೊಲೀಸರ ಜೊತೆ ಮರಾಠಿಗರ ವಾಗ್ವಾದ, ಸ್ಥಳದಲ್ಲಿ ಬಿಗುವಿನ ವಾತಾವರಣ

ಇದೇ ವೇಳೆ ಅರ್ಜಿದಾರ ಜವಾದ್‌ ಅವರ ಪರ ವಕೀಲರು, ‘ಜಗನ್ನಾಥ ಪುರಿ ರಥಯಾತ್ರೆಗೆ ಅವಕಾಶ ನೀಡಿದ್ದೀರಲ್ಲಾ’ ಎಂದು ಪ್ರಶ್ನಿಸಿದಾಗ, ‘ಆ ವಿಷಯವೇ ಬೇರೆ. ಇದೇ ಬೇರೆ. ಜಗನ್ನಾಥನ ರಥಯಾತ್ರೆ ಒಂದು ನಿರ್ದಿಷ್ಟ ಸ್ಥಳಕ್ಕೆ ಸಂಬಂಧಿಸಿದ್ದು. ಹಾಗಾಗಿ ಪರಿಸ್ಥಿತಿ ಅವಲೋಕಿಸಿ ನಾವು ಅನುಮತಿಸಿದೆವು. ಆದರೆ ಮೊಹರಂ ಮೆರವಣಿಗೆ ಹಾಗಲ್ಲ. ಇಡೀ ದೇಶದಲ್ಲಿ ಮೆರವಣಿಗೆ ನಡೆಸುವಂತೆ ಅನುಮತಿಸಲು ನಮ್ಮಿಂದ ಆಗದು. ಒಂದು ಇತಿಮಿತಿಯಲ್ಲಿ ಲಖನೌನಲ್ಲಿ ಮೆರವಣಿಗೆ ನಡೆಸಲು ಅವಕಾಶ ಕೋರಿ ಅಲಹಾಬಾದ್‌ ಹೈಕೋರ್ಟ್‌ಗೆ ನೀವು ಅರ್ಜಿ ಸಲ್ಲಿಸಬಹುದು’ ಎಂದು ಸೂಚಿಸಿತು. ಅರ್ಜಿಯನ್ನು ಹಿಂಪಡೆಯಲು ಕಲ್ಬೆ ಜವಾದ್‌ ಅವರಿಗೆ ಅವಕಾಶ ನೀಡಿತು.