48 ತಾಸಿನಲ್ಲಿ ಮತದಾನ ಪ್ರಮಾಣ ಪ್ರಕಟಕ್ಕೆ ಸುಪ್ರೀಂ ನಕಾರ
5 ಹಂತದ ಚುನಾವಣೆ ಮುಗಿದಿರುವ ಹೊತ್ತಿನಲ್ಲಿ ಇಂಥ ಆದೇಶ ಹೊರಡಿಸಿದರೆ, ಪೂರ್ಣ ಮಾಹಿತಿ ಪ್ರಕಟಕ್ಕೆ ಅಗತ್ಯವಾದ ಮಾನವ ಸಂಪನ್ಮೂಲ ಹೊಂದಿಸುವುದು ಚುನಾವಣಾ ಆಯೋಗಕ್ಕೆ ಸಾಧ್ಯವಾಗದು‘ ಎಂದು ಹೇಳಿ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ
ನವದೆಹಲಿ(ಮೇ.25): ‘ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಪ್ರತಿಬೂತ್‌ಗಳಲ್ಲೂ ಚಲಾವಣೆಯಾದ ಮತಗಳ ಕುರಿತು ಮತದಾನ ನಡೆದ 48 ತಾಸಿನಲ್ಲಿ ಚುನಾವಣಾ ಆಯೋಗದವು ಅಂಕಿ-ಅಂಶ ಪ್ರಕಟಿಸಬೇಕು‘ ಎಂದು ಸ್ವಯಂಸೇವಾ ಸಂಸ್ಥೆಯೊಂದು ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಾತ್ಕಾಲಿಕ ಅವಧಿಗೆ ತಿರಸ್ಕರಿಸಿದೆ.
‘5 ಹಂತದ ಚುನಾವಣೆ ಮುಗಿದಿರುವ ಹೊತ್ತಿನಲ್ಲಿ ಇಂಥ ಆದೇಶ ಹೊರಡಿಸಿದರೆ, ಪೂರ್ಣ ಮಾಹಿತಿ ಪ್ರಕಟಕ್ಕೆ ಅಗತ್ಯವಾದ ಮಾನವ ಸಂಪನ್ಮೂಲ ಹೊಂದಿಸುವುದು ಚುನಾವಣಾ ಆಯೋಗಕ್ಕೆ ಸಾಧ್ಯವಾಗದು‘ ಎಂದು ಹೇಳಿದ ನ್ಯಾಯಾಲಯ ಅರ್ಜಿ ವಿಚಾರಣೆ ಮುಂದೂಡಿದೆ.
Breaking : PMLA ದೂರು ಪರಿಗಣನೆ ಮಾಡಿದ ಮಾತ್ರಕ್ಕೆ ಆರೋಪಿಯನ್ನು ED ಬಂಧಿಸುವಂತಿಲ್ಲ: ಸುಪ್ರೀಂ ಕೋರ್ಟ್!
ಜೊತೆಗೆ, ‘ಇದೇ ವಿಷಯದ ಕುರಿತು ತೃಣಮೂಲ ಕಾಂಗ್ರೆಸ್ ನಾಯಕರು 2019ರಲ್ಲಿ ಸಲ್ಲಿಸಿ, 48 ತಾಸಿನಲ್ಲಿ ಬೂತ್‌ವಾರು ಮತದಾನ ಪ್ರಮಾಣ ಪ್ರಕಟ ಕೋರಿದ್ದರು. ಆ ಅರ್ಜಿ ವಿಚಾರಣೆ ಹಂತದಲ್ಲಿದೆ. ಇದೀಗ ಮಧ್ಯಂತರ ಆದೇಶ ಕೋರಿದ ಅರ್ಜಿಯೂ ಅದೇಶ ಅಂಶಗಳನ್ನು ಪ್ರಸ್ತಾಪಿಸುತ್ತದೆ. ಆದರೆ ಈಗಾಗಲೇ 5 ಹಂತದ ಚುನಾವಣೆ ಮುಗಿದಿದೆ. ಇಂಥ ಹಂತದಲ್ಲಿ ಈ ರೀತಿಯ ಆದೇಶ ಹೊರಡಿಸಲು ಸಾಧ್ಯವಿಲ್ಲ. ಚುನಾವಣೆ ವೇಳೆ ಕೆಲವೊಂದು ನಿರ್ಧಾರಗಳನ್ನು ಸಂಬಂಧಪಟ್ಟವರಿಗೆ ತೆಗೆದುಕೊಳ್ಳಲು ಬಿಡಬೇಕು’ ಎಂದು ಪೀಠ ಹೇಳಿತು ಹಾಗೂ ಚುನಾವಣೆ ಮುಗಿದ ನಂತರ ಟಿಎಂಸಿ ಅರ್ಜಿ ಜತೆ ಈ ಅರ್ಜಿಯನ್ನೂ ವಿಚಾರಣೆ ಮಾಡುವುದಾಗಿ ಹೇಳಿತು.
‘ಬೂತ್‌ವಾರ್ ಮಾಹಿತಿ ಪ್ರಕಟಿಸಿದರೆ ಅದು ದೊಡ್ಡ ಗೊಂದಲಕ್ಕೆ ಕಾರಣವಾಗಬಹುದು’ ಎಂದು ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿದ್ದ ಅಫಿಡವಿಟ್‌ನ ಅಂಶಗಳನ್ನು ತಾತ್ಕಾಲಿಕ ಅವಧಿಗೆ ಪೀಠ ಎತ್ತಿಹಿಡಿಯಿತು.
ವಿಶೇಷ ಸೌಲಭ್ಯ ನೀಡಿದಂತೆ ಕೇಜ್ರಿಗೆ ಸುಪ್ರೀಂ ಜಾಮೀನು: ಅಮಿತ್ ಶಾ ಅತೃಪ್ತಿ
ವಾದ-ಪ್ರತಿವಾದ:
‘ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಎಲ್ಲಾ ಪ್ರಮಾಣಿಕೃತ ಮತಗಳ ಕುರಿತ ಮಾಹಿತಿಯನ್ನು (ಚಲಾವಣೆ ಆದ ಮತ/ ತಿರಸ್ಕಾರಗೊಂಡ ಮತಗಳು) ಚುನಾವಣೆ ಮುಗಿದ 48 ಗಂಟೆಯಲ್ಲಿ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಆಯೋಗಕ್ಕೆ ಸೂಚಿಸಬೇಕು. ಲೋಕಸಭೆ ಚುನಾವಣೆಯ 6 ಹಾಗೂ 7ನೇ ಹಂತದಲ್ಲೇ ಇದು ಜಾರಿಗೆ ಬರಬೇಕು’ ಎಂದು ಎಡಿಆರ್ (ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್) ಅರ್ಜಿ ಸಲ್ಲಿಸಿತ್ತು.
‘ಆದರೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ನಾವು ವಸ್ತುಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯ ಮಧ್ಯದಲ್ಲಿ ನಾವು ಆಯೋಗದ ಮೇಲೆ ಹೆಚ್ಚಿನ ಕಾರ್ಯಭಾರ ಹೊರಿಸಲಾಗದು. ಈ ಅರ್ಜಿಯ ಕುರಿತು ನಾವು ಮಧ್ಯಂತರ ಆದೇಶ ಹೊರಡಿಸಿದರೆ ಅದು, 2019ರ ಅರ್ಜಿಯ ಕುರಿತೂ ಮಧ್ಯಂತರ ಆದೇಶ ಹೊರಡಿಸದಂತೆ ಆಗುತ್ತದೆ. ಹೀಗಾಗಿ ಈ ವಿಷಯದಲ್ಲಿ ಸದ್ಯ ಯಾವುದೇ ಮಧ್ಯಂತರ ಆದೇಶ ಹೊರಡಿಸಲಾಗದು’ ಎಂದ ನ್ಯಾ. ದೀಪಂಕರ್ ದತ್ತಾ ಮತ್ತು ನ್ಯಾ. ಸತೀಶ್ ಚಂದ್ರಾ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆಯನ್ನು ಮುಂದೂಡಿತು.
‘ಫಾರ್ಮ್ 17-ಸಿ ಎನ್ನುವುದು ಮತದಾನವಾಗಿರುವ ಇವಿಎಂಗಳ ದತ್ತಾಂಶ ಒಳಗೊಂಡಿದ್ದು, ಇದು ಕೇವಲ ಚುನಾವಣಾ ಆಯೋಗ ಮತ್ತು ಅಭ್ಯರ್ಥಿ ಅಥವಾ ಏಜೆಂಟ್ ನಡುವಿನ ಸಂವಹನಕ್ಕೆ ಬಳಸುವ ಪ್ರಕ್ರಿಯೆಯಾಗಿದೆ. ಇದನ್ನು ಬಹಿರಂಗ ಮಾಡಿದ್ದೇ ಆದಲ್ಲಿ ಸಾರ್ವಜನಿಕರು ಅದನ್ನು ತಿರುಚಿ ಹರಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡುವ ಅಪಾಯವಿದ್ದು, ಚುನಾವಣೆ ಇನ್ನೂ ಚಾಲ್ತಿಯಲ್ಲಿರುವ ಕಾರಣ ಅದನ್ನು ಬಹಿರಂಗ ಮಾಡುವುದು ಸೂಕ್ತವಲ್ಲ. ಬಳಿಕ ಇದನ್ನು ಮುಂದಿಟ್ಟುಕೊಂಡು ಮತಎಣಿಕೆ ಸಮಯದಲ್ಲಿ ಗೊಂದಲಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಈ ಮೊದಲು ಆಯೋಗ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು.