ನವದೆಹಲಿ(ಮೇ.09): ದೇಶದಲ್ಲಿ ಕೊರೋನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ಸುಪ್ರೀಂಕೋರ್ಟ್‌ ಶನಿವಾರ ಮಹತ್ವದ ಆದೇಶ ಹೊರಡಿಸಿದೆ.

ಅದರನ್ವಯ, ಕಳೆದ ವರ್ಷ ತಜ್ಞರ ಸಮಿತಿ ಶಿಫಾರಸಿನ ಅನ್ವಯ ಯಾವ್ಯಾವ ಕೈದಿಗಳನ್ನು ಜಾಮೀನಿನ ಮೇಲೆ ಮತ್ತು ಪರೋಲ್‌ ಮೇಲೆ ಬಿಡುಗಡೆ ಮಾಡಲಾಗಿತ್ತೋ ಅವರನ್ನು ಈಗಲೂ ಬಿಡುಗಡೆ ಮಾಡಬೇಕು. ಯಾವುದೇ ಹೊಸ ಆದೇಶಕ್ಕೆ ಕಾಯದೇ ತಕ್ಷಣವೇ ರಾಜ್ಯ ಸರ್ಕಾರಗಳು ಈ ಕ್ರವ ಜಾರಿ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚಿಸಿದೆ.

ದೇಶಾದ್ಯಂತ 4 ಲಕ್ಷ ಕೈದಿಗಳು ಜೈಲಿನಲ್ಲಿದ್ದಾರೆ. ಇದು ಕೈದಿಗಳು ಮತ್ತು ಪೊಲೀಸ್‌ ಸಿಬ್ಬಂದಿಗಳ ಆರೋಗ್ಯ ಮತ್ತು ಬದುಕುವ ಹಕ್ಕಿನ ಪ್ರಶ್ನೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.