ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ ಆಲ್ಟ್‌ ನ್ಯೂಸ್‌ನ ಸಹಸಂಸ್ಥಾಪಕ ಮೊಹಮದ್‌ ಜುಬೇರ್‌ನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಆದೇಶ ನೀಡಿದೆ. ಅವರ ವಿರುದ್ಧ ದಾಖಲಾದ ಎಲ್ಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ನವದೆಹಲಿ (ಜುಲೈ 20): ಫ್ಯಾಕ್ಟ್‌ ಚೆಕರ್‌ ಅಥವಾ ಸತ್ಯಾಸತ್ಯತೆ ಪರೀಕ್ಷಕ ಮೊಹಮ್ಮದ್ ಜುಬೇರ್ ಗೆ ಸುಪ್ರೀಂ ಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ಜುಬೇರ್ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳಲ್ಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಅಷ್ಟೇ ಅಲ್ಲ, ಬಂಧನದ ಆದೇಶದ ಬಗ್ಗೆಯೂ ನ್ಯಾಯಾಲಯ ಪ್ರಶ್ನೆಗಳನ್ನು ಎತ್ತಿದೆ. ಮೊಹಮ್ಮದ್ ಜುಬೇರ್ ತನ್ನ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಲ್ಲಾ ಎಫ್‌ಐಆರ್‌ಗಳನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ಇದರೊಂದಿಗೆ ಈ ಅರ್ಜಿಯ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ಮಧ್ಯಂತರ ಜಾಮೀನು ನೀಡುವಂತೆಯೂ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಜುಬೇರ್‌ಗೆ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಬಂಧನದ ಅಧಿಕಾರವನ್ನು ಸಂಯಮದಿಂದ ಚಲಾಯಿಸಬೇಕು ಎಂದು ಹೇಳಿದೆ. ಜುಬೇರ್‌ ಅವರನ್ನು ಅನಿರ್ದಿಷ್ಟ ಕಾಲ ಬಂಧನದಲ್ಲಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. 2018ರಲ್ಲಿ ಮಾಡಿದ್ದ ಟ್ವೀಟ್‌ಗೆ ಸಂಬಂಧಪಟ್ಟಂತೆ ಜೂನ್‌ 28 ರಂದು ಮೊಹಮದ್‌ ಜುಬೇರ್‌ರನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. "ದಿಲ್ಲಿ ಪೊಲೀಸರಿಂದ ಸಾಕಷ್ಟು ನಿರಂತರ ತನಿಖೆಗೆ ಒಳಪಡಿಸಲಾಗಿದೆ ಎಂದು ಕಂಡುಕೊಂಡ ನಂತರ, ಅವರ ಸ್ವಾತಂತ್ರ್ಯವನ್ನು ಮತ್ತಷ್ಟು ತಡೆಯಲು ನಮಗೆ ಯಾವುದೇ ಕಾರಣವಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ದೆಹಲಿ ಪೊಲೀಸರ ವಿಶೇಷ ಸೆಲ್‌ನಿಂದ ತನಿಖೆ: ಜುಬೈರ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಒಟ್ಟುಗೂಡಿಸಿದೆ. ಈಗ ಒಂದೇ ತನಿಖಾ ಸಂಸ್ಥೆ ಈ ಪ್ರಕರಣದಲ್ಲಿ ತನಿಖೆ ನಡೆಸಲಿದೆ. ನ್ಯಾಯಾಲಯವು ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದ 6 ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರ ವಿಶೇಷ ಸೆಲ್‌ಗೆ (Special Cell of Delhi Police) ವರ್ಗಾಯಿಸಿದೆ. ಈ ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ಯುಪಿಯ ಎಸ್‌ಐಟಿಯನ್ನೂ(Uttar Pradesh SIT) ವಿಸರ್ಜನೆ ಮಾಡಲಾಗಿದೆ. ಆದರೆ, ಪ್ರಕರಣವನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಟ್ವೀಟ್‌ ಮಾಡಲು ಹಣ ಪಡೆದಿದ್ದಾಗಿ ಒಪ್ಪಿಕೊಂಡ ಜುಬೇರ್‌: ಸುಪ್ರೀಂಗೆ ಉ.ಪ್ರ. ಪೊಲೀಸ್‌ ಮಾಹಿತಿ

ದ್ವೇಷದ ಟ್ವೀಟ್‌ಗೆ ಹಣ: ಇದಕ್ಕೂ ಮುನ್ನ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಉತ್ತರ ಪ್ರದೇಶ ಸರ್ಕಾರ (Uttar Pradesh Governament) ಜುಬೈರ್ ಅವರು ಪ್ರಚೋದನಕಾರಿ ಟ್ವೀಟ್‌ಗಳಿಗೆ ಹಣ ಪಡೆಯುತ್ತಿದ್ದರು ಎಂದು ಹೇಳಿತ್ತು. ಅವರು ಎಷ್ಟು ಪ್ರಚೋದನಕಾರಿಯಾಗಿ ಟ್ವೀಟ್‌ ಮಾಡುತ್ತಿದ್ದರೋ ಅಷ್ಟು ಪ್ರಮಾಣದಲ್ಲಿ ಹಣ ನೀಡಲಾಗುತ್ತಿತ್ತು. ವಿಚಾರವೇನೆಂದರೆ, ಮೊಹಮದ್‌ ಜುಬೇರ್ ತನ್ನ ವಿರುದ್ಧ ಯುಪಿ ಪೊಲೀಸರು (UP Police) ದಾಖಲಿಸಿರುವ ಎಲ್ಲಾ ಎಫ್‌ಐಆರ್‌ಗಳನ್ನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಅದರೊಂದಿಗೆ ಈ ಅರ್ಜಿಯ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ಮಧ್ಯಂತರ ಜಾಮೀನು ನೀಡುವಂತೆಯೂ ಮನವಿ ಸಲ್ಲಿಸಿದ್ದರು

'ಹನುಮಾನ್ ಹೋಟೆಲ್‌' ಟ್ವೀಟ್ ಪ್ರಕರಣ: ಮೊಹಮ್ಮದ್ ಜುಬೇರ್‌ಗೆ ಜಾಮೀನು, ಆದರೆ ಜೈಲಿನಿಂದ ಬಿಡುಗಡೆ ಇಲ್ಲ!

ಜುಬೇರ್‌ ಪರ ವಾದ ಮಂಡಿಸಿದ ವೃಂದಾ: ಇದಕ್ಕೂ ಮುನ್ನ ವಿಚಾರಣೆ ವೇಳೆ ಜುಬೈರ್ ಪರವಾಗಿ ವೃಂದಾ ಗ್ರೋವರ್ (Vrinda Grover) ಅವರು, ಜುಬೇರ್‌ ವಿರುದ್ಧ ಹೊಸ ಎಫ್‌ಐಆರ್ ದಾಖಲಾಗಿದ್ದು, ಒಂದು ಹತ್ರಾಸ್ ಪ್ರಕರಣವನ್ನು ಹೊರತುಪಡಿಸಿ ಎಲ್ಲಾ ಪ್ರಕರಣಗಳಲ್ಲಿ ಟ್ವೀಟ್ ಮಾತ್ರ ವಿಷಯವಾಗಿದೆ. ಒಂದು ಟ್ವೀಟ್ ಎಲ್ಲಾ ಪ್ರಕರಣಗಳಲ್ಲಿ ತನಿಖೆಯ ವಿಷಯವಾಗಿ ಉಳಿದಿದೆ ಎಂದು ಅವರು ಹೇಳಿದರು. ಆದರೆ ಈ ಹಿಂದೆ 2018ರ ಟ್ವೀಟ್‌ಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇದರಲ್ಲಿ ಜುಬೈರ್‌ಗೆ ಜಾಮೀನು ಕೂಡ ಸಿಕ್ಕಿದೆ. ಆದರೆ ದೆಹಲಿ ಪೊಲೀಸರು ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಲ್ಯಾಪ್‌ಟಾಪ್ ಅನ್ನು ಜಪ್ತಿ ಮಾಡಿದ್ದಾರೆ. ಅವರ ಟ್ವೀಟ್‌ನ ಭಾಷೆ ಪ್ರಚೋದನಕಾರಿಯಾಗಿರಲಿಲ್ಲ ಎಂದು ಜುಬೇರ್ ಪರವಾಗಿ ವಾದ ಮಾಡುವ ವೇಳೆ ಹೇಳಲಾಗಿದೆ.