Asianet Suvarna News Asianet Suvarna News

ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಿಲಿತ್‌ ನೇಮಕ!

ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ 64 ವರ್ಷದ ಯುಯು ಲಲಿತ್‌ ನೇಮಕವಾಗಿದ್ದಾರೆ. ಆಗಸ್ಟ್‌ 27 ರಂದು ಯುಯು ಲಲಿತ್‌ ಅಧಿಕಾರ ಸ್ವೀಕಾರ ಮಾಡಲಿದ್ದು, ಅದರ ಮರುದಿನ ಹಾಲಿ ಸಿಜೆಐ ಆಗಿರುವ ಎನ್‌ವಿ ರಮಣ ನಿವೃತ್ತಿಯಾಗಲಿದ್ದಾರೆ.

Supreme Court Justice Uday Umesh Lalit appointed as the 49th Chief Justice of India san
Author
Bengaluru, First Published Aug 10, 2022, 6:56 PM IST

ನವದೆಹಲಿ (ಆ.10): ನೇಮಕಾತಿಯ ವಾರಂಟ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ ಬಳಿಕ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌, ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗುವುದು ನಿಶ್ಚಿತವಾಗಿದೆ. ಆಗಸ್ಟ್‌ 28 ರಂದು ಹಾಲಿ ಸಿಜೆಐ ಆಗಿರುವ ಎನ್‌ವಿ ರಮಣ ಅವರ ಅಧಿಕಾರದ ಅವಧಿ ಕೊನೆಗೊಳ್ಳಲಿದ್ದು, ಆಗಸ್ಟ್‌ 27 ರಂದು ಯುಯು ಲಲಿತ್‌ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭಾರತದ ಸಂವಿಧಾನದ 124 ನೇ ವಿಧಿಯ ಷರತ್ತು (2) ರ ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ, 2022ರ ಆಗಸ್ಟ್‌ 27 ರಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ರಾಷ್ಟ್ರಪತಿಗಳು ಸೂಚಿಸಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕೇವಲ 74 ದಿನಗಳ ಕಾಲ ಮಾತ್ರವೇ ಯುಯು ಲಿಲಿತ್‌ ಅಧಿಕಾರದಲ್ಲಿ ಇರಲಿದ್ದಾರೆ. ನವೆಂಬರ್‌ 8 ರಂದು ಅವರು 65ನೇ ವರ್ಷಕ್ಕೆ ಕಾಲಿಡುವುದರೊಂದಿಗೆ ಸಿಜೆಐ ಸ್ಥಾನದಿಂದ ನಿವೃತ್ತರಾಗಲಿದ್ದಾರೆ.

ಮಹತ್ವದ ತಲಾಖ್‌ ತೀರ್ಪು ಕೊಟ್ಟಿದ್ದ ನ್ಯಾಯಮೂರ್ತಿ: ಹಾಲಿ ಇರುವ ಮುಖ್ಯ ನ್ಯಾಯಮೂರ್ತಿ ನಿವೃತ್ತಿಯಾಗುವ ಮುನ್ನ, ತಮ್ಮ ಸ್ಥಾನಕ್ಕೆ ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಅದರಂತೆ ಕೇಂದ್ರ ಸಚಿವ ಕಿರಣ್‌ ರಿಜಿಜು, ಇತ್ತೀಚೆಗೆ ಸಿಜೆಐ ಎನ್‌ವಿ ರಮಣ ಅವರಿಗೆ ಸಿಜೆಐ ಸ್ಥಾನಕ್ಕೆ ಶಿಫಾರಸು ಮಾಡುವಂತೆ ಕೇಳಿದ್ದರು. ಅದರಂತೆ ಅವರು ಯುಯು ಲಲಿತ್‌ ಹೆಸರನ್ನು ಶಿಫಾರಸು ಮಾಡಿದ್ದರು. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡುವುದರೊಂದಿಗೆ ಯುಯು ಲಿಲಿತ್‌ ದೇಶದ ಸಿಜೆಐ ಆಗುವುದು ಖಚಿತಗೊಂಡಿದೆ. ಇವರ ನಿವೃತ್ತಿಯ ಬಳಿಕ ಡಿವೈ ಚಂದ್ರಚೂಡ್‌ ದೇಶದ 50ನೇ ಸಿಜೆಐ ಆಗಲಿದ್ದಾರೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗುವ ಮುನ್ನ ವಕೀಲಿಕೆಯಲ್ಲಿದ್ದ ಯುಯು ಲಿಲಿತ್‌ ಅವರನ್ನು, 2014ರಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅವರನ್ನು ನೇರವಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್‌ ಇತಿಹಾಸದಲ್ಲಿ ಈವೆಗೂ ಕೇವಲ 8 ಮಂದಿ ಮಾತ್ರವೇ, ನೇರವಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. 2014ರ ಬಳಿಕ ಈ ರೀತಿಯಲ್ಲಿ ನೇಮಕವಾದ ನಾಲ್ಕನೇ ವ್ಯಕ್ತಿ ಯುಯು ಲಿಲಿತ್.

ಲಲಿತ್ ಅವರು 1983ರ ಜೂನ್‌ನಲ್ಲಿ ಬಾರ್‌ ಕೌನ್ಸಿಲ್‌ಗೆ ಸೇರಿದ್ದರು. 1986 ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. 1986 ರಿಂದ 1992 ರವರೆಗೆ, ಲಲಿತ್ ಅವರು ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರೊಂದಿಗೆ ಕೆಲಸ ಮಾಡಿದ್ದರು. 29 ಏಪ್ರಿಲ್ 2004 ರಂದು, ಲಲಿತ್ ಅವರನ್ನು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ ನೇಮಿಸಲಾಯಿತು. 

ಅಯೋಧ್ಯೆ ವಿಚಾರಣೆ ಮಾಡಲ್ಲ ಎಂದ ನ್ಯಾ. ಉದಯ್ ಲಲಿತ್!

ಸಾಕಷ್ಟು ಹೈ ಪ್ರೋಫೈಲ್‌ ಕೇಸ್‌ಗಳಲ್ಲಿ ನ್ಯಾಯಮೂರ್ತಿಯಾಗಿ ಇವರು ಕೆಲಸ ಮಾಡಿದ್ದಾರೆ. ಕಳೆದ ಅರು ವರ್ಷಗಳಲ್ಲಿ ಇವರ ಐತಿಹಾಸಿಕ ತೀರ್ಪಿನಲ್ಲಿ ಪ್ರಮುಖವಾಗಿದ್ದು, ತ್ರಿವಳಿ ತಲಾಖ್‌ ತೀರ್ಪು. ಐವರು ಸದಸ್ಯರ ಸಾಂವಿಧಾನಿಕ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಯುಯು ಲಿಲಿತ್‌ ಅವರ ಪೀಠವು, 3-2 ಮತಗಳಿಂದ ತ್ರಿವಳಿ ತಲಾಖ್‌ ಎನ್ನುವುದು ಅಸಾಂವಿಧಾನಿಕ ಎಂದು ಹೇಳಿತ್ತು.

ಪದ್ಮನಾಭಸ್ವಾಮಿ ದೇವಸ್ಥಾನ: ತಿರುವಾಂಕೂರು ರಾಮಜನೆತನದ ಹಕ್ಕು ಎತ್ತಿ ಹಿಡಿದ ಸುಪ್ರೀಂ

ತಿರುವಾಂಕೂರು ರಾಜಮನೆತನದ ಹಕ್ಕು ಪುನಃ ನೀಡಿದ್ದ ನ್ಯಾಯಮೂರ್ತಿ: 13 ಜುಲೈ 2020 ರಂದು ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತದ ಹಕ್ಕು ವಿಚಾರದಲ್ಲಿ ತಿರುವಾಂಕೂರು ರಾಜಮನೆತನದ ಹಕ್ಕನ್ನು ಎತ್ತಿಹಿಡಿದ ದ್ವಿಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಯು.ಯು.ಲಲಿತ್ ಭಾಗವಾಗಿದ್ದರು. 2019ರ ಜನವರಿ 10 ರಂದು, ಅಯೋಧ್ಯೆ ವಿವಾದದ ಪ್ರಕರಣದ ವಿಚಾರಣೆಗಾಗಿ ರಚಿಸಲಾದ ಐವರು ನ್ಯಾಯಾಧೀಶರ ಪೀಠದಿಂದ ನ್ಯಾಯಮೂರ್ತಿ ಲಲಿತ್ ಅವರು ಹಿಂದೆ ಸರಿದಿದ್ದರು. ಉತ್ತರ ಪ್ರದೇಶದ ಹಿಂದಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ 'ಸಂಬಂಧಿತ ಪ್ರಕರಣ'ದಲ್ಲಿ ಅವರು ಹಾಜಾರಾಗಿದ್ದನ್ನು ರಾಜೀವ್ ಧವನ್ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇದರ ಬೆನ್ನಲ್ಲಿಯೇ ಅಯೋಧ್ಯೆ ಪ್ರಕರಣದಲ್ಲಿ ತೀರ್ಪುದಾರರಾಗಲು ಅವರು ನಿರಾಕರಿಸಿದ್ದರು. ಇಂಥ ಅನೇಕ ಉನ್ನತ-ಪ್ರೊಫೈಲ್ ಪ್ರಕರಣಗಳಿಂದ ಯುಯು ಲಿಲಿತ್‌ ಸ್ವತಃ ಹಿಂದೆ ಸರಿದಿದ್ದಾರೆ.

Follow Us:
Download App:
  • android
  • ios