ವಿವಿಧ ಪ್ರಕರಣಗಳಲ್ಲಿ ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂಗೆ ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಆದರೆ, ಇನ್ನೆರೆಡು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಈ ಮುಖಂಡರಿನ್ನೂ ಕೆಲವು ದಿನಗಳ ಕಾಲ ಜೈಲು ವಾಸ ತಪ್ಪುವುದಿಲ್ಲ.
ನವದೆಹಲಿ (ಅ.22): ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ದಿಲ್ಲಿಯ ತಿಹಾರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ 1 ಲಕ್ಷ ರೂ. ಬಾಂಡ್‌ನೊಂದಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ.
ಜಾಮೀನು ನೀಡುವಂತೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ತೀರ್ಪು ಹೊರಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಇದರ ವಿರುದ್ಧ ಚಿದಂಬರಂ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕನಿಗೆ ಜಾಮೀನು ಸಿಕ್ಕರೂ, ಇನ್ನು ಕೆಲವು ದಿನಗಳ ಕಾಲ ಇಡಿ ಕಸ್ಟಡಿಯಲ್ಲಿಯೇ ಇರಬೇಕು. ಇದೀಗ ಜಾಮೀನು ಸಿಕ್ಕಿದ್ದು ಸಿಬಿಐ ಪ್ರಕರಣದಲ್ಲಿ. ಆದ್ದರಿಂದ ಇನ್ನು ಕೆಲವು ದಿನಗಳ ಕಾಲ ಜಾಮೀನು ಸಿಕ್ಕರೂ ತಿಹಾರ್ ಜೈಲಿನಲ್ಲಿಯೇ ಇರುವುದು ತಪ್ಪೋಲ್ಲ.
ಜೈಲೂಟ: 4 ಕೆಜಿ ಇಳಿಸಿಕೊಂಡ ಚಿದಂಬರಂ
ಈ ಮಧ್ಯೆ ಐಎನ್‌ಎಕ್ಸ್ ಹಗರಣ ಬಗ್ಗೆ ಅನಾಮಧೇಯ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಆಧರಿಸಿ ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಮತ್ತಿತರರ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀ ಕೋರ್ಟ್ ಚಿದಂಬರಂಗೆ ಜಾಮೀನು ನೀಡುವ ಅನುಮಾನವಿತ್ತಾದರೂ, ಇದೀಗ ಬೇಲ್ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರು ಪ್ರಸ್ತುತ ಜಾರಿ ನಿರ್ದೇಶನಾಲಯ(ಇ.ಡಿ) ವಶದಲ್ಲಿದ್ದಾರೆ.
ಇಡಿ ಕಸ್ಟಡಿಯಲ್ಲಿ ಚಿದು
ಐಎಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಮಾಜಿ ಕೇಂದ್ರ ಸಚಿವ ಚಿದಂಬರಂ ಅವರನ್ನು ಅ.24ರವರೆಗೆ ಇಡಿ ಕಸ್ಟಡಿಗೆ ನೀಡಿ ದೆಹಲಿ ನ್ಯಾಯಾಲಯ ಆದೇಶಿಸಿತ್ತು. ಇದೀಗ ಇದೇ ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ ದೂರಿಗೆ ಬೇಲ್ ಸಿಕ್ಕಿದ್ದರೂ, ಇಡಿ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಜೀಮೀನು ಮಂಜೂರಾಗಬೇಕಿದೆ.
ಪ್ರತ್ಯೇಕ ಸೆಲ, ಮನೆ ಊಟ, ವೆಸ್ಟರ್ನ್ ಶೌಚಾಲಯ, ಔಷಧ ಹಾಗೂ ಪ್ರತೀ ದಿನ ವಕೀಲರೊಂದಿಗೆ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ್ ನೀಡಿದ್ದು, ಪ್ರತೀ 48 ಗಂಟೆಗಳಿಗೊಮ್ಮೆ ಚಿದಂಬರಂ ಆರೋಗ್ಯ ತಪಾಸಣೆ ಮಾಡಬೇಕೆಂದೂ ಕೋರ್ಟ್ ಆದೇಶಿಸಿತ್ತು.
