* ಅಭ್ಯರ್ಥಿ ಆಯ್ಕೆ ಮಾಡಿದ 48 ತಾಸಲ್ಲಿ ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸಿ* ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಹಿರಂಗ ಮಾಡದ 9 ಪಕ್ಷಕ್ಕೆ ದಂಡ* ಅಪರಾಧ ಮುಕ್ತ ರಾಜಕೀಯ: ಸುಪ್ರೀಂಕೋರ್ಟ್ ಮಹತ್ವದ ಆದೇಶ* ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಸಿಪಿಎಂಗೆ ದಂಡದ ಬಿಸಿ
ನವದೆಹಲಿ(ಆ.11): ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯನ್ನು ಕಾಲಮಿತಿಯಲ್ಲಿ ಬಹಿರಂಗಪಡಿಸಬೇಕು ಎಂಬ ತನ್ನ ಹಿಂದಿನ ಆದೇಶವನ್ನು ಉಲ್ಲಂಘಿಸಿದ 9 ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ವಿಷಯದಲ್ಲಿ ಎಚ್ಚರಿಕೆ ವಹಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಜೊತೆಗೆ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಕುರಿತು ಮತದಾರರಿಗೆ ಸುಲಭವಾಗಿ ಮಾಹಿತಿ ಸಿಗುವಂತಾಗಲು ಸೂಕ್ತ ಮೊಬೈಲ್ ಆ್ಯಪ್ ರಚಿಸಿ ಎಂದು ಕೇಂದ್ರ ಚುನಾವಣಾ ಆಯೋಗಕ್ಕೂ ಸೂಚಿಸಿದೆ.
2020ರ ಫೆಬ್ರುವರಿಯಲ್ಲಿ ತೀರ್ಪೊಂದನ್ನು ನೀಡಿದ್ದ ಸುಪ್ರೀಂಕೋರ್ಟ್, ಮುಂಬರುವ ಎಲ್ಲಾ ಚುನಾವಣೆಗಳ ವೇಳೆ, ಅಭ್ಯರ್ಥಿ ಆಯ್ಕೆಯಾದ 48 ಗಂಟೆಗಳ ಒಳಗೆ ಅಥವಾ ನಾಮಪತ್ರ ಸಲ್ಲಿಸುವುದಕ್ಕೂ 2 ವಾರ ಮೊದಲು ತಮ್ಮ ಮೇಲಿನ ಕ್ರಿಮಿನಲ್ ಆರೋಪಗಳ ಕುರಿತು ಬಹಿರಂಗಪಡಿಸಬೇಕು. ರಾಜಕೀಯವನ್ನು ಅಪರಾಧ ಮುಕ್ತಗೊಳಿಸಲು ಇಂಥ ಕ್ರಮ ಅನಿವಾರ್ಯ ಎಂದು ತೀರ್ಪು ನೀಡಿತ್ತು. ಈ ಆದೇಶ ಹೊರಬಿದ್ದ ಬಳಿಕ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು.
ಆದರೆ ಆ ಚುನಾವಣೆ ವೇಳೆ ಬಹುತೇಕ ರಾಜಕೀಯ ಪಕ್ಷಗಳು ಸುಪ್ರೀಂ ಆದೇಶ ಪಾಲನೆಯಲ್ಲಿ ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ಇದನ್ನು ನ್ಯಾಯಾಂಗ ನಿಂದನೆ ಪ್ರಕರಣ ಎಂದು ಪರಿಗಣಿಸಬೇಕು, ತೀರ್ಪು ಪಾಲಿಸದ ರಾಜಕೀಯ ಪಕ್ಷಗಳ ಚಿಹ್ನೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಯ ಕುರಿತು ಮಂಗಳವಾರ ತೀರ್ಪು ನೀಡಿದ ಸುಪ್ರೀಂಕೋರ್ಟ್, ಬಿಜೆಪಿ, ಕಾಂಗ್ರೆಸ್ ಮತ್ತು ಇತರೆ 5 ಪಕ್ಷಗಳಿಗೆ ತಲಾ 1 ಲಕ್ಷ ರು. ದಂಡ ವಿಧಿಸಿದೆ. ಇನ್ನು ಬಿಹಾರ ಚುನಾವಣೆಯಲ್ಲಿ ನಿಯಮ ಉಲ್ಲಂಘಿಸಿದ ಸಿಪಿಎಂ ಮತ್ತು ಎನ್‌ಸಿಪಿ ಪಕ್ಷಗಳಿಗೆ ತಲಾ 5 ಲಕ್ಷ ರು. ದಂಡ ವಿಧಿಸಿದೆ.
ಜೊತೆಗೆ ಮುಂದಿನ ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು 2020ರ ಫೆಬ್ರವರಿ ತೀರ್ಪನ್ನು ಕಡ್ಡಾಯವಾಗಿ ಪಾಲಿಸಬೇಕು. ಅಭ್ಯರ್ಥಿ ಆಯ್ಕೆಯಾದ 48 ಗಂಟೆಗಳಲ್ಲಿ ಆತನ ಕ್ರಿಮಿನಲ್ ಹಿನ್ನೆಲೆ ಕುರಿತು ಪಕ್ಷದ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಬೇಕು. ಕ್ರಿಮಿನಲ್ ಹಿನ್ನೆಲೆ ಇದ್ದರೂ ಅಂಥ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದ್ದು ಏಕೆ ಎಂಬ ವಿವರಣೆಯನ್ನು ಪಕ್ಷಗಳು ನೀಡಬೇಕು. ಇಂಥ ಅಭ್ಯರ್ಥಿಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬೇಕು, ಕ್ರಿಮಿನಲ್ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಲು ಚುನಾವಣಾ ಆಯೋಗ ಪ್ರತ್ಯೇಕ ಮೊಬೈಲ್ ಆ್ಯಪ್ ರಚಿಸಬೇಕು ಎಂದು ಆದೇಶ ಹೊರಡಿಸಿದೆ.
