ನವದೆಹಲಿ(ಫೆ.14): ಸಂವಿಧಾನ ಪ್ರತಿಭಟನೆಯ ಹಕ್ಕನ್ನು ಕೊಟ್ಟಿದೆಯಾದರೂ, ಅದು ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಬಳಸುವ ಅಸ್ತ್ರವಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಈ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ವರ್ಷ ದೆಹಲಿ ಶಾಹೀನ್‌ಬಾಗ್‌ ಪ್ರದೇಶದಲ್ಲಿ ನಡೆದ ಸಿಎಎ-ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯನ್ನು ಒಪ್ಪಲಾಗದು ಎಂದಿದ್ದ ತನ್ನ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಅಲ್ಲದೆ ತನ್ನ ಆದೇಶವನ್ನು ಪುನರ್‌ ಪರಿಶೀಲನೆ ನಡೆಸುವಂತೆ ಕೋರಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ನಿರಾಕರಿಸಿದೆ.

‘ಪುನರ್‌ ಪರಿಶೀಲನಾ ಅರ್ಜಿಯನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಮನವಿಯ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಆದರೆ ಅದರಲ್ಲಿನ ಅಂಶಗಳು ನಮ್ಮ ಆದೇಶವನ್ನು ಪುನರ್‌ ಪರಿಶೀಲನೆ ಮಾಡುವಂಥ ಯಾವುದೇ ಅಗತ್ಯವನ್ನು ಪ್ರತಿಪಾದಿಸುತ್ತಿಲ್ಲ. ಹೀಗಾಗಿ ಅರ್ಜಿಯನ್ನು ವಜಾ ಮಾಡಲಾಗುತ್ತಿದೆ’ ಎಂದು ನ್ಯಾ.ಎಸ್‌.ಕೆ.ಕೌಲ್‌, ನ್ಯಾ.ಅನಿರುದ್ಧ ಬೋಸ್‌ ಮತ್ತು ನ್ಯಾ. ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿತು.

‘ಸಂವಿಧಾನ ನಮಗೆ ಪ್ರತಿಭಟನೆ ಮತ್ತು ಭಿನ್ನಾಭಿಪ್ರಾಯದ ಹಕ್ಕು ಕೊಟ್ಟಿದೆಯಾದರೂ, ಅದು ಕೆಲವೊಂದು ಬಾಧ್ಯತೆಗೆ ಒಳಪಟ್ಟಿದೆ. ಪ್ರತಿಭಟನೆ, ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಮಾಡುವಂಥದ್ದಲ್ಲ. ಕೆಲವೊಮ್ಮೆ ಸ್ವಾಭಾವಿಕವಾಗಿ ಇಂಥ ಘಟನೆ ನಡೆಯಬಹುದು. ಆದರೆ ಸುದೀರ್ಘ ಭಿನ್ನಾಭಿಪ್ರಾಯ ಅಥವಾ ಪ್ರತಿಭಟನೆ ವೇಳೆ ಸಾರ್ವಜನಿಕ ಪ್ರದೇಶಗಳನ್ನು ಅತಿಕ್ರಮಿಸಿಕೊಂಡು ಇತರರ ಹಕ್ಕುಗಳನ್ನು ಮೊಟಕುಗೊಳಿಸಲಾಗದು’ ಎಂದು ಕೋರ್ಟ್‌ ಸ್ಪಷ್ಟಪಡಿಸಿತು.

‘ಪ್ರಜಾಪ್ರಭುತ್ವ ಮತ್ತು ಭಿನ್ನ ಅಭಿಪ್ರಾಯಗಳು ಜೊತೆಜೊತೆಯಾಗಿ ಹೋಗಬಹುದು. ಆದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ವಸಾಹತುಶಾಹಿಗಳ ವಿರುದ್ಧ ಕೇಳಿಬಂದ ಪ್ರತಿಭಟನೆಯನ್ನು ಈಗಿನ ಸ್ವಯಂ ಆಡಳಿತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೋಲಿಸಲಾಗದು. ಯಾವುದೇ ಶಾಸನದ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಸ್ವಾಗತ ಮಾಡಬಹುದಾದರೂ, ಅದು ಅನಿರ್ದಿಷ್ಟಾವಧಿಗೆ ಸಾರ್ವಜನಿಕರ ಸ್ಥಳವನ್ನು ತಡೆಹಿಡಿಯುವುದನ್ನು ಒಪ್ಪಲಾಗದು’ ಎಂದು ಕೋರ್ಟ್‌ ಹೇಳಿತು.

ಪ್ರಕರಣ ಹಿನ್ನೆಲೆ:

ಪೌರತ್ವ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ದೆಹಲಿ ಶಾಹೀನ್‌ಬಾಗ್‌ ಪ್ರದೇಶದಲ್ಲಿ ಹಲವು ತಿಂಗಳು ಕಾಲ ರಸ್ತೆ ಬಂದ್‌ ಮಾಡಿ ಹೋರಾಟ ನಡೆಸಿದ್ದವು. ಇದನ್ನು ಪ್ರಶ್ನಿಸಿ ವಕೀಲ ಅಮಿತ್‌ ಸಾಹ್ನಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು 2020ರ ಅ.7ರಂದು ಆದೇಶ ನೀಡಿದ್ದ ನ್ಯಾಯಾಲಯ ರಸ್ತೆ ತಡೆ ಪ್ರತಿಭಟನೆ ನಡೆಸುವುದನ್ನು ಒಪ್ಪಲಾಗದು. ಕೂಡಲೇ ರಸ್ತೆ ತಡೆ ತೆರವು ಮಾಡಬೇಕೆಂದು ಆದೇಶಿತ್ತು. ಈ ಆದೇಶವನ್ನು ಪುನರ್‌ ಪರಿಶೀಲನೆ ಮಾಡುವಂತೆ ಹಲವು ಪ್ರತಿಭಟನಾಕಾರರು ಮೇಲ್ಮನವಿ ಸಲ್ಲಿಸಿದ್ದರು.