* 2 ವರ್ಷದಿಂದಲೂ ನಡೆಯದ ಚುನಾವಣೆ* ಇದು ಕಾನೂನು ಉಲ್ಲಂಘನೆ: ಕೋರ್ಟ್ ಚಾಟಿ* ಕ್ಷೇತ್ರ ಮರುವಿಂಗಡಣೆಗೆ ಕಾಯಬೇಡಿ* ಒಬಿಸಿ ಮೀಸಲು ಇಲ್ಲದೇ ಚುನಾವಣೆ ನಡೆಸಿ
ನವದೆಹಲಿ(ಮೇ.11): ಕಳೆದ 2 ವರ್ಷಗಳಿಂದ ಬಾಕಿ ಉಳಿದಿರುವ ಮಧ್ಯಪ್ರದೇಶದ 23000 ಸ್ಥಳೀಯ ಸಂಸ್ಥೆಗಳಿಗೆ ಕೂಡಲೇ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಚ್ ಸೂಚಿಸಿದೆ. ಇಷ್ಟೊಂದು ವರ್ಷ ಚುನಾವಣೆ ನಡೆಸದೇ ಇದ್ದುದು ಕಾನೂನು ಉಲ್ಲಂಘನೆ ಎಂದು ಅದು ಕಿಡಿಕಾರಿದೆ.
ಸ್ಥಳೀಯ ಸಂಶ್ಥೆಗಳ ಕ್ಷೇತ್ರ ಮರುವಿಂಗಡಣೆ ನಡೆಯಬೇಕು ಎಂದು ಕಾಯುವುದು ತಪ್ಪು. ಸಂಸ್ಥೆಯ 5 ವರ್ಷ ಅವಧಿ ಪೂರ್ಣಗೊಂಡಾಗ ಎಷ್ಟುಕ್ಷೇತ್ರಗಳು ಇದ್ದವೋ ಅಷ್ಟುಕ್ಷೇತ್ರಗಳನ್ನಷ್ಟೇ ಪರಿಗಣಿಸಿ ಚುನಾವಣೆ ನಡೆಸಬೇಕು. ಅಲ್ಲದೆ, ಚುನಾವಣೆ ನಡೆಸಲು ‘ಒಬಿಸಿ’ (ಹಿಂದುಳಿದ ವರ್ಗ) ಮೀಸಲು ನೀಡಿಕೆ ಪ್ರಕ್ರಿಯೆ ಆಗಿಲ್ಲ ಎಂಬ ಕಾರಣ ನೀಡಿ ಮುಂದೂಡಿಕೆ ತಪ್ಪು. ಎಸ್‌ಸಿ-ಎಸ್‌ಟಿ ಕ್ಷೇತ್ರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಕ್ಷೇತ್ರಗಳನ್ನು ‘ಸಾಮಾನ್ಯ’ ಎಂದು ಪರಿಗಣಿಸಿ ಚುನಾವಣೆ ನಡೆಸಬೇಕು. ಇನ್ನೆರಡು ವಾರದಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಆದೇಶಿಸಿದೆ.
ಅಲ್ಲದೆ, ಸುಪ್ರೀಂಕೋರ್ಚ್‌ನ ಸಾಂವಿಧಾನಿಕ ಪೀಠವು 2010ರ ತನ್ನ ಆದೇಶದಲ್ಲಿ ಸೂಚಿಸಿದ್ದ ಟ್ರೀಪಲ್ ಟೆಸ್ಟ್ ಎಕ್ಸ್‌ರ್‌ಸೈಸ್ (ಮೀಸಲು ನಿಗದಿಗೆ ಸಮಿತಿ ರಚನೆ/ ಜಾತಿಗಳ ದತ್ತಾಂಶ ಸಂಗ್ರಹ/ ಜಾತಿಗಳ ಹಿಂದುಳಿದಿರುವಿಕೆ ಗುರುತು) ಪೂರ್ಣಗೊಳ್ಳುವವರೆಗೂ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ (ಒಬಿಸಿ)ದ ಮೀಸಲು ನೀಡಲು ಸಾಧ್ಯವಿಲ್ಲ. ಅಲ್ಲದೆ, ಮೀಸಲು ಪ್ರಮಾಣ ಶೇ.50 ಮೀರುವಂತಿಲ್ಲ. ಹಾಗಂತ ಈ ವರದಿಗೆ ಕಾಯುತ್ತ ಕೂರಬೇಕಿಲ್ಲ. 5 ವರ್ಷ ಅವಧಿ ಮುಗಿದ ಸಂಸ್ಥೆಗಳಿಗೆ ಕೂಡಲೇ ಚುನಾವಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿದೆ.
ಈ ಆದೇಶ ಮಧ್ಯಪ್ರದೇಶ ಪ್ರಕರಣಕ್ಕೆ ಸಂಬಂಧಿಸಿದ್ದಾದರೂ, ಒಬಿಸಿ ಮೀಸಲು ನಿಗದಿಯಾಗದ ಹೊರತೂ ಕರ್ನಾಟಕದಲ್ಲೂ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದಿಲ್ಲ ಎಂಬ ರಾಜ್ಯ ಸರ್ಕಾರದ ನಿರ್ಧಾರದ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.
ತಕ್ಷಣ ಚುನಾವಣೆ:
ಮಧ್ಯಪ್ರದೇಶದಲ್ಲಿ ಈ ಹಿಂದಿನ ಕಾಂಗ್ರೆಸ್ ಮತ್ತು ಹಾಲಿ ಬಿಜೆಪಿ ಸರ್ಕಾರಗಳು ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು 23263 ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುತ್ತಲೇ ಬಂದಿದ್ದವು. ಕೆಲವು ಸಂಸ್ಥೆಗಳಿಗೆ 2019ರಿಂದಲೂ ಚುನಾವಣೆ ಬಾಕಿ ಇದೆ. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ಕುರಿತು ನ್ಯಾ.ಎ.ಎಂ.ಖಾನ್ವಿಲ್ಕರ್ ಅವರನ್ನೊಳಗೊಂಡ ನ್ಯಾಯಪೀಠ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.
ಆದೇಶದಲ್ಲೇನಿದೆ?:
‘ಚುನಾವಣಾ ಪ್ರಕ್ರಿಯೆಗಳನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು. ಏಕೆಂದರೆ 5 ವರ್ಷಗಳ ಅವಧಿ ಮುಗಿದ ಬಳಿಕ ಹೊಸ ಪ್ರತಿನಿಧಿಗಳ ಆಯ್ಕೆ ಮಾಡದೇ ಇದ್ದರೆ ಅಲ್ಲಿ ಆಡಳಿತದ ಸರಪಳಿ ಕಳಚಿಕೊಳ್ಳುತ್ತದೆ. ಕಾಲಕ್ಕೆ ಸರಿಯಾಗಿ ಚುನಾವಣೆ ನಡೆಸುವುದು ಸಾಂವಿಧಾನಿಕ ಬಾಧ್ಯತೆ’ ಎಂದಿದೆ.
