ಎಲ್ಲರಿಗೂ ಉಚಿತ ಲಸಿಕೆ ಬಗ್ಗೆ ಯೋಚಿಸಿ: ಸುಪ್ರೀಂ| ರಾಜ್ಯಕ್ಕೆ, ಕೇಂದ್ರಕ್ಕೆ ಪ್ರತ್ಯೇಕ ಲಸಿಕೆ ದರ ಏಕೆ: ಸುಪ್ರೀಂ ಪ್ರಶ್ನೆ| ಲಸಿಕೆ ಹಂಚಿಕೆ, ದರವನ್ನು ಖಾಸಗಿ ಕಂಪನಿ ನಿರ್ಧರಿಸುವಂತಾಗಬಾರದು| ಕೇಂದ್ರ ಸರ್ಕಾರ ರಾಷ್ಟ್ರೀಯ ಲಸಿಕೆ ಯೋಜನೆ ಜಾರಿಗೆ ತರಲಿ

ನವದೆಹಲಿ(ಮೇ.01): ದೇಶದ ಎಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು. ಈ ದಿಸೆಯಲ್ಲಿ ರಾಷ್ಟ್ರೀಯ ಲಸಿಕೆ ಆಂದೋಲನ ನಡೆಸುವುದು ಒಳ್ಳೆಯದು ಎಂದು ಸಲಹೆ ನೀಡಿರುವ ಸುಪ್ರೀಂಕೋರ್ಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೋವಿಡ್‌ ಲಸಿಕೆಗೆ ಪ್ರತ್ಯೇಕ ದರ ಏಕೆ ನಿಗದಿಪಡಿಸಲಾಗಿದೆ ಎಂದು ಪ್ರಶ್ನಿಸಿದೆ.

ದೇಶದಲ್ಲಿ ಕೊರೋನಾ ಸ್ಥಿತಿ ಕೈಮೀರುತ್ತಿರುವ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌, ಶುಕ್ರವಾರದ ವಿಚಾರಣೆಯ ವೇಳೆ ದೇಶಾದ್ಯಂತ ಏಕರೂಪದ ಲಸಿಕೆ ಆಂದೋಲನ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಖಾಸಗಿ ಲಸಿಕೆ ಉತ್ಪಾದಕ ಕಂಪನಿಗಳು ಯಾವ ರಾಜ್ಯಕ್ಕೆ ಎಷ್ಟುಲಸಿಕೆ ನೀಡಬೇಕು ಎಂಬುದನ್ನು ನಿರ್ಧರಿಸುವಂತಾಗಬಾರದು. ಈಗ ಉತ್ಪಾದನೆಯಾದ ಶೇ.100ರಷ್ಟುಲಸಿಕೆಯನ್ನು ಕೇಂದ್ರ ಸರ್ಕಾರವೇ ಏಕೆ ಖರೀದಿಸುತ್ತಿಲ್ಲ? ಕೇಂದ್ರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಎರಡು ರೀತಿಯ ದರ ಏಕಿರಬೇಕು? ಇದರ ಹಿಂದಿನ ತರ್ಕವೇನು ಎಂದು ಪ್ರಶ್ನಿಸಿತು.

"

ಬಡವರಿಗೆ ಲಸಿಕೆ ಪಡೆಯಲು ಹಣ ನೀಡುವ ಶಕ್ತಿ ಇರುವುದಿಲ್ಲ. ದುರ್ಬಲ ವರ್ಗದವರು ಹಾಗೂ ನಿರ್ಲಕ್ಷಿತ ಎಸ್‌ಸಿ, ಎಸ್‌ಟಿ ಸಮುದಾಯದವರ ಕತೆಯೇನು? ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣ ತೆತ್ತು ಅವರು ಲಸಿಕೆ ಪಡೆಯಬೇಕೇ ಎಂದೂ ನ್ಯಾಯಪೀಠ ಕೇಳಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona