ಕೋಲ್ಕತಾ/ಭುವನೇಶ್ವರ(ಮೇ.21): ಭೀಕರ ‘ಅಂಫನ್‌’ ಚಂಡಮಾರುತ ಬುಧವಾರ ಪಶ್ಚಿಮ ಬಂಗಾಳದ ಕರಾವಳಿಗೆ ಬುಧವಾರ ಅಪ್ಪಳಿಸಿದೆ. ಗಂಟೆಗೆ 190 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಅಪ್ಪಳಿಸಿರುವ ಈ ಚಂಡಮಾರುತ, ಬಂಗಾಳ ಹಾಗೂ ಒಡಿಶಾದಲ್ಲಿ ಮೊದಲ ದಿನವೇ ವ್ಯಾಪಕ ವಿನಾಶ ಸೃಷ್ಟಿಸಿದೆ. ಬಂಗಾಳದಲ್ಲಿ ಇಬ್ಬರು ಮಹಿಳೆಯರು ಅಸುನೀಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಂಗಾಳದಲ್ಲಿ 5 ಲಕ್ಷ ಹಾಗೂ ಒಡಿಶಾದಲ್ಲಿ 1.58 ಲಕ್ಷ ಜನ ಸೇರಿದಂತೆ ಒಟ್ಟು 6.58 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮಧ್ಯಾಹ್ನ 2.30ಕ್ಕೆ ಚಂಡಮಾರುತವು ಪ.ಬಂಗಾಳದ ದಿಘಾ ಹಾಗೂ ಬಾಂಗ್ಲಾದೇಶದ ಹಟಿಯಾ ದ್ವೀಪದ ನಡುವೆ ಬಂದು ಅಪ್ಪಳಿಸಿತು. ಮೊದಲು 170 ಕಿ.ಮೀ. ವೇಗದಲ್ಲಿದ್ದ ಚಂಡಮಾರುತ 190 ಕಿ.ಮೀ. ವೇಗ ಪಡೆದುಕೊಂಡಿತು. ಇದರಿಂದಾಗಿ ಬಂಗಾಳದ ಹಲವೆಡೆ ಕರಾವಳಿ ಪ್ರದೇಶಗಳು ತತ್ತರಗೊಂಡಿದ್ದು, ಜನವಸತಿ ಪ್ರದೇಶಗಳು ಮುಳುಗಿವೆ. ಮರಗಳು ಹಾಗೂ ವಿದ್ಯುತ್‌ ಕಂಬಗಳು ಧರಾಶಾಯಿ ಆಗಿವೆ. ಹೌರಾ ಜಿಲ್ಲೆ ಹಾಗೂ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮರ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.

ರಕ್ಷಣಾ ಕಾರ್ಯಗಳಿಗೆಂದು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯು (ಎನ್‌ಡಿಆರ್‌ಎಫ್‌), 20 ತಂಡಗಳನ್ನು ಒಡಿಶಾಗೆ ಹಾಗೂ 19 ತಂಡಗಳನ್ನು ಪ.ಬಂಗಾಳಕ್ಕೆ ಕಳಿಸಿಕೊಟ್ಟಿದೆ. ಪಡೆಗಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿವೆ ಹಾಗೂ ಬಿದ್ದ ಮರ ತೆರವು ಮಾಡಿ ರಸ್ತೆ ಸಂಚಾರ ಸುಗಮಕ್ಕೆ ದಾರಿ ಮಾಡಿಕೊಡುತ್ತಿವೆ. ಚಂಡಮಾರುತದ ಭೀಕರತೆ ಎಷ್ಟಿತ್ತೆಂದರೆ ದೈತ್ಯಾಕಾರದ ಅಲೆಗಳು ಕರಾವಳಿಗೆ ಅಪ್ಪಳಿಸುತ್ತಿರುವುದು ಹಾಗೂ ಭೀಕರ ಮಳೆ ಸುರಿಯುತ್ತಿರುವುದು ದೃಶ್ಯಗಳಲ್ಲಿ ಗೋಚರಿಸಿತು.

ಕೋಲ್ಕತಾ, ಪರಗಣ, ಹೂಗ್ಲಿ, ಮೇದಿನಿಪುರ ಸೇರಿದಂತೆ ಬಂಗಾಳದ ಅನೇಕ ಭಾಗಗಳು, ಒಡಿಶಾದ ಪುರಿ, ಜಗತ್‌ಸಿಂಗ್‌ಪುರ, ಕಟಕ್‌, ಬಾಲಸೋರ್‌ ಸೇರಿದಂತೆ ಅನೇಕ ಕಡೆ ಭಾರಿ ಮಳೆ ವರದಿ ಬಂದಿವೆ. ಇನ್ನೂ 1-2 ದಿನ ಬೀಸಿ ಚಂಡಮಾರುತ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮನ ಇಲಾಖೆ ಹೇಳಿದೆ.

ವಂದೇ ಭಾರತ ಎಕ್ಸ್‌ಪ್ರೆಸ್‌ಗಿಂತ ವೇಗದ ಮಾರುತ!

ಅಂಫಾನ್‌ ಚಂಡಮಾರುತವು ವಂದೇಭಾರತ ಎಕ್ಸ್‌ಪ್ರೆಸ್‌ ರೈಲಿನ ವೇಗಕ್ಕಿಂತ ಹೆಚ್ಚು ವೇಗವಾಗಿ ಬೀಸಿದೆ. ವಂದೇಭಾರತ ಎಕ್ಸ್‌ಪ್ರೆಸ್‌ ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡುತ್ತಿದ್ದರೆ, ಅಂಫಾನ್‌ ಗಂಟೆಗೆ 190 ಕಿ.ಮೀ. ವೇಗದಲ್ಲಿ ಬೀಸಿದೆ.

ಅಂಫನ್‌ ಎಂದರೆ ಆಕಾಶ

ಅಂಫನ್‌ ಎಂದು ಈ ಚಂಡಮಾರುತಕ್ಕೆ ಹೆಸರು ಇಟ್ಟಿದ್ದು ಥಾಯ್ಲೆಂಡ್‌. 2004ರಲ್ಲೇ ಅದು ನಾಮಕರಣ ಮಾಡಿತ್ತು. ಅಂಫನ್‌ ಎಂದರೆ ‘ಆಕಾಶ’ ಎಂದರ್ಥ. ‘ಉಂಪುನ್‌’ ಎಂದೂ ಥಾಯ್‌ ಭಾಷೆಯಲ್ಲಿ ಇದಕ್ಕೆ ಸಂಬೋಧಿಸುತ್ತಾರೆ.