ರೈತರ ತಡೆಯಲು ರಸ್ತೆಗೆ ಮೊಳೆ!| ರೈತ ಪ್ರತಿಭಟನೆ ಗಾಜಿಪುರ ಮಾರ್ಗದ ಹೆದ್ದಾರಿಗಳಲ್ಲಿ ಮೊಳೆ| ಮುಳ್ಳು ತಂತಿ ಬೇಲಿ ಹಾಕಿ ನಡೆದು ಬರುತ್ತಿರುವ ರೈತರ ತಡೆ| ಗಾಜಿಪುರದಲ್ಲಿ ಡ್ರೋನ್‌ಗಳು ಸೇರಿ ಭಾರೀ ಬಿಗಿ ಬಂದೋಬಸ್ತ್

ಗಾಜಿಯಾಬಾದ್‌(ಫೆ.02): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಗೆ ಭಾರೀ ಪ್ರಮಾಣದ ರೈತರ ದಂಡು ಹರಿದುಬರುತ್ತಿರುವ ದೆಹಲಿ-ಉತ್ತರ ಪ್ರದೇಶದ ಗಡಿ ಗಾಜಿಪುರದಲ್ಲಿ ಅಕ್ಷರಶಃ ಪೊಲೀಸ್‌ ಸರ್ಪಗಾವಲಿನಿಂದ ಭದ್ರ ಕೋಟೆಯಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಟಿಕ್ರಿ, ಗಾಜಿಪುರ ಹಾಗೂ ಸಿಂಘೂ ಗಡಿಗಳಿಗೆ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿರುವ ರೈತರ ತಡೆಗಾಗಿ ಭಾರೀ ಬ್ಯಾರಿಕೇಡ್‌ಗಳ ಜೊತೆಗೆ ರಸ್ತೆಯಲ್ಲಿ ಮೊಳೆಗಳು ಮತ್ತು ಚೂಪಾದ ರಾಡುಗಳನ್ನು ಅಳವಡಿಸಲಾಗಿದೆ.

ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌ ಸೇರಿದಂತೆ ಇನ್ನಿತರ ರೈತ ಮುಖಂಡರ ನೇತೃತ್ವದಲ್ಲಿ ಗಾಜಿಪುರದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಹರಾರ‍ಯಣ, ಪಂಜಾಬ್‌, ರಾಜಸ್ಥಾನ ಸೇರಿದಂತೆ ಇನ್ನಿತರ ರಾಜ್ಯಗಳ ಹಳ್ಳಿಹಳ್ಳಿಗಳಿಂದ ಭಾರೀ ಪ್ರಮಾಣದ ಅನ್ನದಾತರ ದಂಡು ಹರಿದುಬರುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಾಕಾರರ ನಿಯಂತ್ರಣಕ್ಕಾಗಿ ಡ್ರೋನ್‌ಗಳು, ಭಾರೀ ಪ್ರಮಾಣದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.