ಗಲಭೆಕೋರರ ವಿರುದ್ಧ ಈಗ ಪೊಲೀಸ್‌ ಸಮರ| ಷರತ್ತು ಉಲ್ಲಂಘನೆ| ದಿಲ್ಲಿ ದಂಗೆಕೋರರಿಗೆ ಬಿಸಿ| 25 ಎಫ್‌ಐಆರ್‌ ದಾಖಲು| 19 ಮಂದಿ ಬಂಧನ, 220 ಮಂದಿ ವಶಕ್ಕೆ| ಯೋಗೇಂದ್ರ, ಟಿಕಾಯತ್‌ ಸೇರಿ 37 ಮುಖಂಡರ ವಿರುದ್ಧ ಪ್ರಕರಣ

ನವದೆಹಲಿ(ಜ.28): ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್‌ ಪರೇಡ್‌ ವೇಳೆ ಕಂಡು ಕೇಳರಿಯದ ಗಲಭೆ ನಡೆಸಿದವರ ವಿರುದ್ಧ ದಿಲ್ಲಿ ಪೊಲೀಸರು ‘ಸಮರ’ ಸಾರಿದ್ದಾರೆ. ಈವರೆಗೆ 25 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 19 ಮಂದಿಯನ್ನು ಬಂಧಿಸಿದ್ದಾರೆ ಹಾಗೂ 200 ಜನರನ್ನು ವಶಕ್ಕೆ ಪಡೆದಿದ್ದಾರೆ. ‘ಒಬ್ಬನೇ ಒಬ್ಬ ತಪ್ಪಿತಸ್ಥನನ್ನೂ ಬಿಡುವುದಿಲ್ಲ’ ಎಂದು ಗುಡುಗಿದ್ದಾರೆ.

ಎಫ್‌ಐಆರ್‌ನಲ್ಲಿ 37 ರೈತ ಮುಖಂಡರ ಹೆಸರು ಇವೆ. ಇವರಲ್ಲಿ ರೈತ ಮುಖಂಡರಾದ ಯೋಗೇಂದ್ರ ಯಾದವ್‌, ದರ್ಶನ್‌ ಪಾಲ್‌, ರಾಕೇಶ್‌ ಟಿಕಾಯತ್‌ ಪ್ರಮುಖರು.

ಈ ನಡುವೆ, ಗಲಭೆಯಲ್ಲಿ 394 ಪೊಲೀಸರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬ ಪೊಲೀಸನ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 30 ಪೊಲೀಸ್‌ ವಾಹನಗಳು ದಾಳಿಗೆ ತುತ್ತಾಗಿವೆ. 428 ಪೊಲೀಸ್‌ ಬ್ಯಾರಿಕೇಡ್‌ಗಳು ಧ್ವಂಸಗೊಂಡಿವೆ.

ಕ್ರೈಮ್‌ ಬ್ರ್ಯಾಂಚ್‌, ವಿಶೇಷ ದಳ, ವಿವಿಧ ಜಿಲ್ಲಾ ಘಟಕಗಳು ಒಂದು ಜಂಟಿ ತಂಡವು ಈ ಘಟನೆಯ ತನಿಖೆ ನಡೆಸಲಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉನ್ನತ ಗೃಹ ಸಚಿವಾಲಯದ ಅಧಿಕಾರಿಗಳ ಜತೆ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.

ತನಿಖೆಗೆ ಸಂಬಂಧಿಸಿದಂತೆ ಬುಧವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ದಿಲ್ಲಿ ಪೊಲೀಸ್‌ ಮುಖ್ಯಸ್ಥ ಎಸ್‌.ಎನ್‌. ಶ್ರೀವಾಸ್ತವ, ‘ಟ್ರ್ಯಾಕ್ಟರ್‌ ರಾರ‍ಯಲಿಗೆ ಪೊಲೀಸರು ವಿಧಿಸಿದ ಎಲ್ಲಾ ಷರತ್ತುಗಳನ್ನು ಪಾಲಿಸುತ್ತೇವೆಂದು ಮಾತು ಕೊಟ್ಟಿದ್ದ ರೈತ ಮುಖಂಡರು ನಂತರ ಅವುಗಳನ್ನು ಉಲ್ಲಂಘಿಸಿದ್ದರು. ರೈತ ಮುಖಂಡರಾದ ಸತ್ನಾಮ್‌ ಸಿಂಗ್‌ ಪನ್ನು ಹಾಗೂ ದರ್ಶನ್‌ ಪಾಲ್‌ ಅವರು ಪ್ರಚೋದನಕಾರಿ ಭಾಷಣ ಮಾಡಿದರು. ಬಳಿಕವೇ ಬ್ಯಾರಿಕೇಡ್‌ಗಳನ್ನು ಗಲಭೆಕೋರರು ಕಿತ್ತೆಸೆದು ನಿಗದಿತವಲ್ಲದ ಸ್ಥಳಗಳತ್ತ ನುಗ್ಗಿದರು. ಶಾಂತಿ ಕಾಯ್ದುಕೊಳ್ಳುತ್ತೇವೆ ಎಂದು ಈ ಮುನ್ನ ನಮಗೆ ನೀಡಿದ ಭರವಸೆಯನ್ನು ಪ್ರತಿಭಟನಾಕಾರರು ಪಾಲಿಸಲಿಲ್ಲ’ ಎಂದು ಹೇಳಿದರು.

‘ಆದಾಗ್ಯೂ ಪೊಲೀಸರು ಸಂಯಮ ತೋರಿದರು. ಪೊಲೀಸರ ಪ್ರತೀಕಾರಕ್ಕೆ ಒಬ್ಬನೇ ಒಬ್ಬ ರೈತನೂ ಬಲಿ ಆಗಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಯಾರೇ ತಪ್ಪು ಮಾಡಿದರೂ ಅವರನ್ನು ಬಿಡುವುದಿಲ್ಲ. ಸಿಸಿಟೀವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಇದರ ಆಧಾರದಲ್ಲಿ ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ’ ಎಂದು ಅವರು ಹೇಳಿದರು. ಈ ಮೂಲಕ ಇನ್ನಷ್ಟುಬಂಧನಗಳು ನಡೆಯುವ ಸುಳಿವು ನೀಡಿದರು.

ಯಾವ ಪರಿಚ್ಛೇದಗಳು?:

ಗಲಭೆಕೋರರ ವಿರುದ್ಧ ಅವರ ವಿರುದ್ಧ ಐಪಿಸಿ 147, 148 (ಗಲಭೆ), ಐಪಿಸಿ 395 (ಡಕಾಯಿತಿ), ಐಪಿಸಿ 397 (ಸುಲಿಗೆ ಹಾಗೂ ಹತ್ಯೆ ಯತ್ನ), ಐಪಿಸಿ 120ಬಿ (ಕ್ರಿಮಿನಲ್‌ ಸಂಚು) ಮುಂತಾದ ಸೆಕ್ಷನ್‌ಗಳಡಿ ಕೇಸು ದಾಖಲಿಸಲಾಗಿದೆ. ಗಲಭೆಕೋರರು ಕೆಂಪುಕೋಟೆಯೊಳಗೆ ಇರಿಸಿದ್ದ ಅನೇಕ ಕಲಾಕೃತಿಗಳನ್ನು ಕದ್ದೊಯ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಂಬಂಧ ಯೋಗೇಂದ್ರ ಯಾದವ್‌, ಟಿಕಾಯತ್‌, ದರ್ಶನ್‌ ಪಾಲ್‌ ಅವವಲ್ಲದೇ, ರಾಜಿಂದರ್‌ ಸಿಂಗ್‌, ಬಲಬೀರ್‌ ಸಿಂಗ್‌ ರಾಜೇವಾಲ್‌, ಬೂಟಾ ಸಿಂಗ್‌ ಬುಜ್‌ರ್‍ಗಿಲ್‌, ಜೋಗಿಂದರ್‌ ಸಿಂಗ್‌ ಉಗ್ರಾಹಾ ಮುಂತಾದವರ ವಿರುದ್ಧ ಕೇಸು ದಾಖಲಿಸಲಾಗಿದೆ.

ಟ್ರ್ಯಾಕ್ಟರ್‌ ರಾರ‍ಯಲಿಗೆ ವಿಧಿಸಿದ್ದ ಷರತ್ತು ಪಾಲಿಸುತ್ತೇವೆಂದು ಮಾತುಕೊಟ್ಟಿದ್ದ ರೈತ ಮುಖಂಡರು ಅದನ್ನು ಉಲ್ಲಂಘಿಸಿದರು. ಪ್ರಚೋದನಕಾರಿ ಭಾಷಣ ಮಾಡಿದರು. ಹಿಂಸಾಚಾರ ನಡೆಸಿದರು. ಆದಾಗ್ಯೂ, ತಮ್ಮ ಮೇಲೆ ದಾಳಿ ನಡೆಸಿದರೂ ಪೊಲೀಸರು ಸಂಯಮ ತೋರಿದರು. ತಪ್ಪು ಮಾಡಿದ ಯಾರನ್ನೂ ನಾವು ಬಿಡುವುದಿಲ್ಲ.

- ಎಸ್‌.ಎನ್‌.ಶ್ರೀವಾಸ್ತವ, ದಿಲ್ಲಿ ಪೊಲೀಸ್‌ ಮುಖ್ಯಸ್ಥ