2016ರ ಕುಟುಕು ಕಾರ್ಯಾಚರಣೆ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ. ಇದೀಗ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕನಿಗೆ ಸಿಬಿಐ ನೋಟೀಸ್ ನೀಡಿದೆ. ಸಿಬಿಐ ಕಚೇರಿಗೆ ಆಗಮಿಸಿ ತನಿಖೆಗೆ ಸಹಕರಿಸುವಂತೆ ನೋಟಿಸ್‌ನಲ್ಲಿ ಸೂಚಿಸಿದೆ.

ಡೆಹ್ರಡೂನ್(ಜೂ.30) ಹಳೇ ಪ್ರಕರಣವೊಂದು ಕಾಂಗ್ರೆಸ್ ಸಂಕಷ್ಟ ಹೆಚ್ಚಿಸಿದೆ. 2016ರ ಸ್ಟಿಂಗ್ ಆಪರೇಶನ್ ವಿಡಿಯೋ ಉತ್ತರಖಂಡ ಕಾಂಗ್ರೆಸ್‌ಗೆ ಇನ್ನಿಲ್ಲದ ಸಮಸ್ಯೆ ಕೊಡುತ್ತಿದೆ. ಇದೀಗ ಈ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಬಿಐ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್‌ಗೆ ಸಿಬಿಐ ನೊಟೀಸ್ ನೀಡಿದೆ. ಜುಲೈ 4 ರೊಳಗೆ ವಿಚಾರಣೆಗೆ ಹಾಜರಾಗಲು ನೊಟೀಸ್‌ನಲ್ಲಿ ಸೂಚಿಸಲಾಗಿದೆ. ಹರೀಶ್ ರಾವತ್ ಮನೆಗೆ ತೆರಳಿದ ಸಿಬಿಐ ಅಧಿಕಾರಿಗಳು ನೊಟಿಸ್ ನೀಡಿದ್ದಾರೆ. ಇನ್ನು ಇಮೇಲ್ ಹಾಗೂ ದೂರವಾಣಿ ಮೂಲಕವೂ ಹರೀಶ್ ರಾವತ್‌ಗೆ ನೋಟಿಸ್ ಕಳುಹಿಸಲಾಗಿದೆ.

2016ರಲ್ಲಿ ಉತ್ತರಖಂಡದಲ್ಲಿ ಸ್ಟಿಂಗ್ ಆಪರೇಶನ್ ವಿಡಿಯೋವೊಂದು ಭಾರಿ ಕೋಲಾಹಲ ಎಬ್ಬಸಿತ್ತು. ಈ ಸ್ಟಿಂಗ್ ವಿಡಿಯೋದಲ್ಲಿ 9 ಕಾಂಗ್ರೆಸ್ ಶಾಸಕರ ಹರೀಶ್ ರಾವತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಉತ್ತರಖಂಡದಲ್ಲಿ ಕಾಂಗ್ರೆಸ್ ಸೋಲಿಗೆ ಹರೀಶ್ ರಾವತ್ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಅನ್ನೋ ಗಂಭೀರ ಆರೋಪ ಮಾಡಿದ್ದರು. ಇಷ್ಟೇ ಅಲ್ಲ ಇದಕ್ಕೆ ಪೂರಕ ದಾಖಲೆಗಳನ್ನು ಈ ಸ್ಟಿಂಗ್ ವಿಡಿಯೋದಲ್ಲಿ ನೀಡಲಾಗಿತ್ತು. ಜೊತೆಗೆ ಹರೀಶ್ ರಾವತ್ ಹೊಂದಾಣಿಕೆ ರಾಜಕೀಯ ಕುರಿತು ಮಾತನಾಡಿರುವ ವಿಡಿಯೋ ಕೂಡ ಭಾರಿ ಸಂಚಲನ ಸೃಷ್ಟಿಸಿತ್ತು.

ಒಡಿಶಾ ರೈಲು ದುರಂತ: ಸಿಬಿ​ಐ​ನಿಂದ ಸಿಗ್ನಲ್‌ ಜೂನಿಯರ್‌ ಎಂಜಿನಿಯರ್‌ ವಿಚಾರಣೆ

ಈ ವಿಡಿಯೋ ಉತ್ತರಖಂಡ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಸಿತ್ತು. ಈ ಪ್ರಕರಣ ಪೊಲೀಸ್ ತನಿಖೆ ಬಳಿಕ ಸಿಬಿಐ ಮೆಟ್ಟಿಲೇರಿತ್ತು.ಸುದೀರ್ಘ ದಿನಗಳ ಬಳಿಕ ಇದೀಗ ಸಿಬಿಐ ಪ್ರಕರಣದ ತನಿಖೆ ಚುರುಕುಗೊಳಿಸಿದೆ. ಈ ಸ್ಟಿಂಗ್ ಆಪರೇಶನ್‌ನಲ್ಲಿ ಹರೀಶ್ ರಾವತ್ ಮಾತುಕತೆ ವಿಡಿಯೋ ಕೂಡ ಇದೆ. ಹೀಗಾಗಿ ಹರೀಶ್ ರಾವತ್ ಧ್ವನಿ ಮಾದರಿ ಸಂಗ್ರಹಿಸಲು ಇದಿಗ ನೋಟಿಸ್ ನೀಡಲಾಗಿದೆ. ಸಿಬಿಐ ಕಚೇರಿಗೆ ಆಗಮಿಸಿ ಧ್ವನಿ ನೀಡಬೇಕಾಗಿ ನೋಟಿಸ್‌ನಲ್ಲಿ ಹೇಳಿದೆ. 

ಈ ಬೆಳವಣಿಗೆ ಬಳಿಕ ಕಳೆದ ಉತ್ತರಖಂಡ ವಿಧಾನಸಭಾ ಚುನಾವಣೆಯಲ್ಲಿ ಹರೀಶ್ ರಾವತ್‌ಗೆ ಬೆಂಬಲ ನೀಡಲು ಕಾಂಗ್ರೆಸ್ ನಾಯಕರು ಹಿಂದೇಟು ಹಾಕಿದ್ದರು. ಈ ವೇಳೆ ಹರೀಶ್ ರಾವತ್ ರಾಜೀನಾಮೆ ನಿರ್ಧಾರ ಮಾಡಿದ್ದರು. ಪಕ್ಷದಲ್ಲಿ ನನಗೆ ಸಹಕಾರ ಸಿಗುತ್ತಿಲ್ಲ, ನಿವೃತ್ತಿಯಾಗಬೇಕು ಎನಿಸುತ್ತಿದೆ’ ಎಂದು ಬುಧವಾರ ರಾವತ್‌ ಟ್ವೀಟ್‌ ಮಾಡಿದ್ದರು. ಈ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರೂ ಅಸಮಾಧಾನ ಹೊರಹಾಕಿದ್ದರು. 

ಇದು ವಿಚಿತ್ರವಲ್ಲವೇ? ಚುನಾವಣೆಯೆಂಬ ಸಮುದ್ರವನ್ನು ನಾನು ಈಜ ಬೇಕಾದ ಸಂದರ್ಭದಲ್ಲಿ, ನೆರವಿನ ಹಸ್ತ ಚಾಚಬೇಕಿದ್ದ ಸಂಘಟನೆಯ ವ್ಯವಸ್ಥೆ, ಬಹುತೇಕ ಕಡೆ ಒಂದೋ ಮುಖ ತಿರುಗಿಸಿಕೊಂಡು ಕುಳಿತಿದೇ ಇಲ್ಲವೇ ನಕಾರಾತ್ಮಕ ಕೆಲಸಗಳನ್ನು ಮಾಡುತ್ತಿದೆ. ಆಡಳಿತಾರೂಢ ಪಕ್ಷವು, ಈ ಸಮುದ್ರದಲ್ಲಿ ಹಲವು ಮೊಸಳೆಗಳನ್ನು ಬಿಟ್ಟಿದೆ. ಯಾರ ಆದೇಶದಂತೆ ನಾನು ಈಜಬೇಕಿದೆಯೋ, ಅವರಿಂದ ನೇಮಕಗೊಂಡವರೇ ನನ್ನ ಕೈ ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಹೀಗಾಗಿಯೇ ಹಲವು ಬಾರಿ ನನ್ನ ಅಂತರಾತ್ಮವು ‘ಹರೀಶ್‌ ರಾವತ್‌ ಇನ್ನು ಸಾಕು. ನೀನು ಸಾಕಷ್ಟುಈಜಿದ್ದೀಯಾ. ಇದು ವಿರಾಮದ ಸಮಯ’ ಎಂದು ಹೇಳುತ್ತಲೇ ಇರುತ್ತದೆ. ಹೀಗಾಗಿ ನಾನೀಗ ಗೊಂದಲದಲ್ಲಿದ್ದೇನೆ. ಹೊಸ ವರ್ಷ ನನಗೆ ಹೊಸ ದಿಕ್ಕು ತೋರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಸರಣಿ ಟ್ವೀಟ್ ಮಾಡಿದ್ದರು. ಬಳಿಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಮಾತುಕತೆ ನಡೆಸಿ ಬಂಡಾಯ ಶಮನಗೊಳಿಸಲಾಗಿತ್ತು. ಆದರೆ ಈ ಪ್ರಕರಣ ಇದೀಗ ಮತ್ತೆ ಮುನ್ನಲೆಗೆ ಬಂದಿದೆ.

ಸೌಜನ್ಯ ರೇಪ್‌ & ಮರ್ಡರ್: ಸಂತೋಷ್‌ ರಾವ್‌ ನಿರ್ದೋಷಿ, ಸಿಬಿಐ ಕೋರ್ಟ್‌ ತೀರ್ಪು