ಸೂರತ್(ನ.02)‌: ಶನಿವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಕೆವಾಡಿಯದಲ್ಲಿ ಉದ್ಘಾಟಿಸಿದ್ದ ದೇಶದ ಮೊದಲ ಸೀ ಪ್ಲೇನ್‌ಗೆ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, ಒಂದೇ ದಿನ ಬರೋಬ್ಬರಿ 3000 ಬುಕ್ಕಿಂಗ್‌ ಲಭಿಸಿದೆ ಎಂದು ಸ್ಪೈಸ್‌ ಜೆಟ್‌ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿದ ಸ್ಪೈಸ್‌ ಜೆಟ್‌ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್‌ ಸಿಂಗ್‌, ಈ ಯೋಜನೆಗೆ ಪ್ರಧಾನಿ ಹೆಚ್ಚಿನ ಬೆಂಬಲ ನೀಡಿದ್ದಾರೆ. ಉದ್ಘಾಟನೆ ನಡೆಸಿದ್ದು ಮಾತ್ರವಲ್ಲ ನಮ್ಮ ಮೊದಲ ಗ್ರಾಹಕ ಕೂಡ ಅವರೇ. ಬೇರೆ ನಗರಗಳಿಂದ ಕೂಡ ಏಕತಾ ಪ್ರತಿಮಗೆ ಸಂಪರ್ಕ ಕಲ್ಪಿಸುವ ಇರಾದೆ ಇದೆ. ಟಿಕೆಟ್‌ ದರ .1500-5000 ಇದ್ದು, ಶೇ.30ರಷ್ಟುಸೀಟುಗಳು ಉಡಾನ್‌ ಯೋಜನೆಯಡಿ .1500ಕ್ಕೆ ಲಭ್ಯವಿರಲಿದೆ. ಉಳಿದ ಸೀಟುಗಳಿಗೆ ಮಾರುಕಟ್ಟೆದರ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ದೇಶದ ಮೊದಲ ಸೀಪ್ಲೇನ್‌:

ಕೇರಳ ಸರ್ಕಾರ 2013ರಲ್ಲಿ ದೇಶದ ಮೊದಲ ಸೀಪ್ಲೇನ್‌ ಪ್ರಾಯೋಗಿಕ ಹಾರಾಟ ನಡೆಸಿತ್ತಾದರೂ, ಮೀನುಗಾರರು ಹಾಗೂ ಸ್ಥಳೀಯರ ವಿರೋಧದಿಂದಾಗಿ ಅದು ವಾಣಿಜ್ಯಿಕ ಹಾರಾಟ ಪ್ರಾರಂಭಿಸಿರಲಿಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭಿಸಿರುವ ದೇಶದ ಮೊದಲ ಸೀಪ್ಲೇನ್‌ ಇದಾಗಿದೆ.

ದರ ಎಷ್ಟು?:

ಗುಜರಾತ್‌ನ ಕೆವಾಡಿಯಾ ಹಾಗೂ ಅಹಮದಾಬಾದ್‌ ನಡುವೆ ತಲಾ 2 ಬಾರಿ ಸಂಚರಿಸುವ ಈ ವಿಮಾನದ ಪ್ರತಿ ಟಿಕೆಟ್‌ ಬೆಲೆ ಉಡಾನ್‌ ಯೋಜನೆಯಡಿ 1500 ರು.ನಿಂದ ಆರಂಭವಾಗುತ್ತದೆ. ಸ್ಪೈಸ್‌ ಜೆಟ್‌ ಕಂಪನಿ ವಿಮಾನ ಹಾರಾಟ ಸೇವೆ ಒದಗಿಸುತ್ತಿದೆ.

5 ತಾಸಿನ ಪಯಣಕ್ಕೆ 40 ನಿಮಿಷ:

ಅಹಮದಾಬಾದ್‌ಗೆ ಭೇಟಿ ನೀಡಿದವರು ವಿಶ್ವದ ಅತಿದೊಡ್ಡ ಪ್ರತಿಮೆಯಾಗಿರುವ ಸರ್ದಾರ್‌ ಪಟೇಲರ ಪ್ರತಿಮೆ ವೀಕ್ಷಿಸಬೇಕು ಎಂದರೆ ರಸ್ತೆ ಮಾರ್ಗವಾಗಿ ಕೆವಾಡಿಯಾ ತಲುಪಲು 5 ತಾಸು ಸಮಯ ತೆಗೆದುಕೊಳ್ಳುತ್ತಿತ್ತು. ಇದೀಗ ಸೀ ಪ್ಲೇನ್‌ನಲ್ಲಿ 40 ನಿಮಿಷದಲ್ಲಿ ಕ್ರಮಿಸಬಹುದಾಗಿದೆ.