ನವದೆಹಲಿ[ಡಿ.23]: ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ವಿಮಾನದಲ್ಲಿ ಸೀಟಿಗಾಗಿ ರಾದ್ಧಾಂತ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.

ಶನಿವಾರ ಸಾಧ್ವಿ ದೆಹಲಿಯಿಂದ ಭೋಪಾಲ್‌ಗೆ ತೆರಳಲು ಟಿಕೆಟ್‌ ಕಾದಿರಿಸಿದ್ದರು. ಅದು ತುರ್ತು ನಿರ್ಗಮನ ದ್ವಾರಕ್ಕೆ ಸನಿಹದಲ್ಲಿರುವ ಆಸನವಾಗಿತ್ತು. ಸಾಧ್ವಿ ಗಾಲಿ ಕುರ್ಚಿಯಲ್ಲಿ ಬಂದು ಆಸನದಲ್ಲಿ ಕೂರಲು ಮುಂದಾದರು.

ಗಾಲಿ ಕುರ್ಚಿ ಪ್ರಯಾಣಿಕರಿಗೆ ಆ ಸಾಲಿನ ಆಸನಗಳನ್ನು ನೀಡಲಾಗದ ಕಾರಣ, ಪಕ್ಕದ ಸಾಲಿನಲ್ಲಿ ಕೂರುವಂತೆ ವಿಮಾನ ಸಿಬ್ಬಂದಿ ಸೂಚಿಸಿದರು. ಇದಕ್ಕೆ ಸಾಧ್ವಿ ಒಪ್ಪಲಿಲ್ಲ. ಹೀಗಾಗಿ ವಿಮಾನ ಟೇಕಾಫ್‌ ವಿಳಂಬವಾಯಿತು. ಸಹಪ್ರಯಾಣಿಕರು ಮನವೊಲಿಸಿದರೂ ಸಾಧ್ವಿ ಮಣಿಯಲಿಲ್ಲ.

ಕೊನೆಗೆ ಇತರ ಪ್ರಯಾಣಿಕರು ಸಾಧ್ವಿಯನ್ನು ವಿಮಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿದರು. ಬಳಿಕ ಸಾಧ್ವಿ ಬೇರೆ ಆಸನದಲ್ಲಿ ಕುಳಿತರು ಎಂದು ಸ್ಪೈಸ್‌ ಜೆಟ್‌ ಸಂಸ್ಥೆ ತಿಳಿಸಿದೆ.