ನವದೆಹಲಿ (ಅ.02):  ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಯಂತಹ ಗಣ್ಯಾತಿಗಣ್ಯ ವ್ಯಕ್ತಿಗಳ ಓಡಾಟಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಮಾನವೊಂದು ಅಮೆರಿಕದಿಂದ ಗುರುವಾರ ದೆಹಲಿಗೆ ಬಂದಿಳಿದಿದೆ.

ಕ್ಷಿಪಣಿ ದಾಳಿ ನಡೆದರೂ ಜಗ್ಗದ ಈ ವಿಮಾನ ಅಮೆರಿಕ ಅಧ್ಯಕ್ಷರು ಬಳಸುವ ‘ಏರ್‌ಫೋರ್ಸ್‌ ಒನ್‌’ ರೀತಿಯೇ ಭದ್ರತಾ ಸೌಕರ್ಯ ಹೊಂದಿದೆ. ಇದನ್ನು ‘ಏರ್‌ ಇಂಡಿಯಾ ಒನ್‌’ ಎಂದು ಸಂಬೋಧಿಸಲಾಗುತ್ತದೆ.

ಗಣ್ಯರ ಸಂಚಾರಕ್ಕೆ ಹಲವು ಭದ್ರತಾ ಅಂಶಗಳನ್ನು ಹೊಂದಿದ ಎರಡು ವಿಮಾನಗಳನ್ನು ಮೀಸಲಿಡಲು ಸರ್ಕಾರ ನಿರ್ಧರಿಸಿತ್ತು. ಅದರ ಭಾಗವಾಗಿ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾದಲ್ಲಿ ಪ್ರಯಾಣಿಕ ಸೇವೆಯಲ್ಲಿ ನಿರತವಾಗಿದ್ದ ಎರಡು ವಿಮಾನಗಳನ್ನು ಅಮೆರಿಕದ ಬೋಯಿಂಗ್‌ ಕಂಪನಿಗೆ 2018ರಲ್ಲಿ ಕಳುಹಿಸಿ, ಮಾರ್ಪಾಡು ಮಾಡಲು ಸೂಚಿಸಲಾಗಿತ್ತು. ಈ ವಿಮಾನಗಳು ಜುಲೈನಲ್ಲೇ ಭಾರತಕ್ಕೆ ಸಿಗಬೇಕಾಗಿದ್ದವು. ಆದರೆ ಕೊರೋನಾ ಕಾರಣ ಜುಲೈನಲ್ಲಿ, ತಾಂತ್ರಿಕ ಕಾರಣ ಆಗಸ್ಟ್‌ನಲ್ಲಿ ಹಸ್ತಾಂತರ ಮುಂದಕ್ಕೆ ಹೋಗಿತ್ತು.

ಇದೀಗ ಗುರುವಾರ ಮಧ್ಯಾಹ್ನ 3ಕ್ಕೆ ಅಮೆರಿಕದ ಟೆಕ್ಸಾಸ್‌ನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಒಂದು ವಿಮಾನ ಬಂದಿಳಿದಿದೆ. ಇನ್ನೊಂದು ಶೀಘ್ರದಲ್ಲೇ ಬರಲಿದೆ. ವಿಮಾನ ಖರೀದಿ, ವಿವಿಐಪಿಗಳ ಓಡಾಟಕ್ಕೆ ತಕ್ಕಂತೆ ಬದಲಾವಣೆ ಮಾಡಲು 8400 ಕೋಟಿ ರು. ಖರ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾನಂಗಳದಲ್ಲಿ ಫೋಟೋಶೂಟ್; ಲೋಹದ ಹಕ್ಕಿಗಳಿಂದ ಸಖತ್ ಪೋಸ್; ಫೋಟೋಗ್ರಾಫರ್‌ಗೆ ಶಹಬ್ಬಾಸ್! ..

ಬಿ777 ಎಂಬ ಹೆಸರಿನ ಈ ವಿಮಾನಗಳು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಿದೆ. ‘ಲಾಜ್‌ರ್‍ ಏರ್‌ಕ್ರಾಫ್ಟ್‌ ಇನ್‌ಫ್ರಾರೆಡ್‌ ಕೌಂಟರ್‌ಮೆಸ​ರ್‍ಸ್’ (ಲೆಎಐಆರ್‌ಸಿಎಂ) ಹಾಗೂ ‘ಸೆಲ್ಪ್‌ ಪ್ರೊಟೆಕ್ಷನ್‌ ಸೂಟ್ಸ್‌’ (ಎಸ್‌ಪಿಎಸ್‌)ಗಳು ಈ ವಿಮಾನದಲ್ಲಿದ್ದು, ಸಮಾಜ ವಿದ್ರೋಹಿ ಶಕ್ತಿಗಳು ಹೆಗಲ ಮೇಲಿಟ್ಟು ನಡೆಸುವ ಕ್ಷಿಪಣಿ ದಾಳಿಯಿಂದ ರಕ್ಷಣೆ ಒದಗಿಸಲಿದೆ. ಈ ಸಾಧನಗಳನ್ನು 1400 ಕೋಟಿ ರು. ವೆಚ್ಚದಲ್ಲಿ ಭಾರತಕ್ಕೆ ಒದಗಿಸಲು ಫೆಬ್ರವರಿಯಲ್ಲಿ ಅಮೆರಿಕ ನಿರ್ಧಾರ ಕೈಗೊಂಡಿತ್ತು.

ಏರ್‌ ಇಂಡಿಯಾ ವಿಮಾನದ ಪೈಲಟ್‌ಗಳ ಬದಲಿಗೆ ಹೊಸ ವಿಮಾನವನ್ನು ವಾಯುಪಡೆ ಪೈಲಟ್‌ಗಳು ಚಾಲನೆ ಮಾಡಲಿದ್ದಾರೆ. ಸದ್ಯ ದೇಶದ ವಿವಿಐಪಿಗಳು ತಮ್ಮ ವಿಮಾನ ಸಂಚಾರಕ್ಕೆ ಏರ್‌ ಇಂಡಿಯಾದ ಬಿ 747 ವಿಮಾನವನ್ನು ಬಳಕೆ ಮಾಡುತ್ತಿದ್ದಾರೆ. ಅದನ್ನೂ ಏರ್‌ ಇಂಡಿಯಾ ಒನ್‌ ಎಂದು ಕರೆಯಲಾಗುತ್ತದೆ. ಗಣ್ಯರ ಸಂಚಾರ ಇಲ್ಲದ ಸಂದರ್ಭದಲ್ಲಿ ಏರ್‌ ಇಂಡಿಯಾ ಸಂಸ್ಥೆ ಈ ವಿಮಾನಗಳನ್ನು ಪ್ರಯಾಣಿಕರ ಸಂಚಾರಕ್ಕೆ ನಿಯೋಜನೆ ಮಾಡುತ್ತದೆ.