* ಕೇರಳ, ಈಶಾನ್ಯ ಭಾರತದಲ್ಲಿ ಪೂರ್ವ ಮುಂಗಾರು ಅಬ್ಬರ* ಅಂಡಮಾನ್‌ಗೆ ನೈಋುತ್ಯ ಮುಂಗಾರು ಪ್ರವೇಶ* ನಾಳೆ ಕರಾವಳಿ, ದಕ್ಷಿಣ ಕರ್ನಾಟಕದಲ್ಲಿ ಅತಿ ಭಾರಿ ಮಳೆ?
ನವದೆಹಲಿ(ಮೇ.17): ದೇಶದ ಕೃಷಿ ಚಟುವಟಿಕೆಗಳ ಜೀವನಾಡಿಯಾಗಿರುವ ನೈಋುತ್ಯ ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸೋಮವಾರ ಪ್ರವೇಶಿಸಿವೆ. ಅದರೊಂದಿಗೆ ಭಾರತದಲ್ಲಿ ಈ ವರ್ಷದ ನಾಲ್ಕು ತಿಂಗಳ ಮಳೆಗಾಲ ಅಧಿಕೃತವಾಗಿ ಆರಂಭವಾದಂತಾಗಿದೆ. ಕೇರಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಶನಿವಾರದಿಂದಲೇ ಪೂರ್ವ ಮುಂಗಾರು ಮಳೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದ್ದು, ಇನ್ನೂ ಎರಡು ದಿನ ಆ ರಾಜ್ಯಗಳಲ್ಲಿ ಭಾರಿ ಮತ್ತು ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಮುಂಗಾರು ಮಾರುತಗಳು ಸಶಕ್ತವಾಗಿದ್ದು, ಮುಂದಿನ 2-3 ದಿನಗಳಲ್ಲಿ ಬಂಗಾಳ ಕೊಲ್ಲಿಯ ಇನ್ನಷ್ಟುಭಾಗಕ್ಕೆ ವ್ಯಾಪಿಸಲಿವೆ. ಮುಂದಿನ ಐದು ದಿನಗಳಲ್ಲಿ ಕೇರಳ, ತಮಿಳುನಾಡು, ಲಕ್ಷದ್ವೀಪ ಹಾಗೂ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಪೂರ್ವ ಮಾರುತಗಳು ಉತ್ತಮ ಮಳೆ ಸುರಿಸಲಿದೆ. ಬುಧವಾರ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಬಾರಿ ಆಸಾನಿ ಚಂಡಮಾರುತದಿಂದಾಗಿ ನೈಋುತ್ಯ ಮುಂಗಾರು ಮಾರುತಗಳಿಗೆ ವೇಗ ದೊರೆತಿದ್ದರಿಂದ ವಾಡಿಕೆಗಿಂತ ಐದು ದಿನ ಮೊದಲೇ, ಅಂದರೆ ಜೂನ್ 1ಕ್ಕಿಂತ ಐದು ದಿನ ಮೊದಲು ಮೇ 27ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಕೆಲ ದಿನಗಳ ಹಿಂದೆ ಹವಾಮಾನ ಇಲಾಖೆ ಹೇಳಿತ್ತು.
