ಸೋನಿಯಾ ಗಾಂಧಿಗೆ ಮತ್ತೆ ವಕ್ಕರಿಸಿದ ಕೊರೊನಾ ಸೋಂಕು: 3 ತಿಂಗಳಲ್ಲಿ ಎರಡನೇ ಬಾರಿಗೆ COVID-19
ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ ಈ ಹಿಂದೆ ಜೂನ್ ತಿಂಗಳಲ್ಲೂ ಕೊರೊನಾ ಸೋಂಕಿಗೊಳಗಾಗಿದ್ದರು. ಈಗ ಮತ್ತೆ ಅವರಿಗೆ ಕೋವಿಡ್ - 19 ದೃಢಪಟ್ಟಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇತ್ತೀಚೆಗೆ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇಂದು ಮತ್ತೆ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ಲೋಕಸಭೆಯ ಮಾಜಿ ಸ್ಪೀಕರ್ ಆಗಿದ್ದ ಮೀರಾ ಕುಮಾರ್ ಅವರಿಗೂ ಕೋವಿಡ್ - 19 ಸೋಂಕು ದೃಢಪಟ್ಟಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶನಿವಾರ ಮಾಹಿತಿ ನೀಡಿದ್ದಾರೆ. ಕಳೆದ 3 ತಿಂಗಳಲ್ಲಿ ಸೋನಿಯಾ ಗಾಂಧಿಗೆ 2 ಬಾರಿ ಕೋವಿಡ್ - 19 ಸೋಂಕು ದೃಢಪಟ್ಟಿದೆ. ಇನ್ನು, ಪಕ್ಷದ ಅಧ್ಯಕ್ಷೆ ಸರ್ಕಾರಿ ನಿಯಮಗಳ ಪ್ರಕಾರ ಐಸೊಲೇಷನ್‌ನಲ್ಲಿರಲಿದ್ದಾರೆ ಎಂದೂ ರಾಜ್ಯಸಭಾ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಸಂವಹನ, ಪ್ರಚಾರ ಹಾಗೂ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್, ‘’ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಇಂದು ಕೋವಿಡ್ - 19 ಸೋಂಕು ದೃಢಪಟ್ಟಿದೆ. ಅವರು ಸರ್ಕಾರಿ ಪ್ರೋಟೋಕಾಲ್ ಪ್ರಕಾರ ಐಸೊಲೇಷನ್‌ನಲ್ಲಿರಲಿದ್ದಾರೆ’’ ಎಂದು ತಿಳಿಸಿದ್ದಾರೆ. ಬಿಹಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನವಾಗಿ ಮಹಾಘಟಬಂಧನ ಸರ್ಕಾರ ರಚನೆಯಾದ ಬಳಿಕ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿದ ಮರುದಿನವೇ ಕಾಂಗ್ರೆಸ್ ಅಧ್ಯಕ್ಷೆಗೆ ಸೋಂಕು ವಕ್ಕರಿಸಿದೆ.
ಇನ್ನು, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹ ಈ ಸಂಬಂಧ ಮಾಹಿತಿ ಮಾಡಿದ್ದು, ಪಕ್ಷದ ಅಧ್ಯಕ್ಷೆಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹಾಗೂ ಕೋವಿಡ್ - 19ನಿಂದ ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಮೀರಾ ಕುಮಾರ್‌ಗೂ ಕೋವಿಡ್ - 19
ಈ ಮಧ್ಯೆ ಲೋಕಸಭಾ ಮಾಜಿ ಸ್ಪೀಕರ್ ಹಾಗೂ ಕೇಂದ್ರದ ಮಾಜಿ ಸಚಿವೆ ಮೀರಾ ಕುಮಾರ್ ಅವರಿಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತ: ಮೀರಾ ಕುಮಾರ್ ಮಾಹಿತಿ ನೀಡಿದ್ದಾರೆ. ‘’ನನಗೆ ಕಳೆದ ರಾತ್ರಿ ಮತ್ತೆ ಕೋವಿಡ್ - 19 ಸೋಂಕು ದೃಢಪಟ್ಟಿದ್ದು, ಹೋಂ ಕ್ವಾರಂಟೈನ್‌ನಲ್ಲಿದ್ದೇನೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ, ನನ್ನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರಿಗೂ ಕೋವಿಡ್-19 ಪ್ರೋಟೋಕಾಲ್ ಅನ್ನು ಅನುಸರಿಸಲು ನಾನು ವಿನಂತಿಸುತ್ತೇನೆ’’ ಎಂದು ಅವರು ಶನಿವಾರ ಟ್ವೀಟ್ ಮಾಡಿದ್ದಾರೆ.