Asianet Suvarna News Asianet Suvarna News

ಅವಿವಾಹಿತೆಯ ಮಕ್ಕಳಿಗೂ ದೇಶದಲ್ಲಿ ಜೀವಿಸುವ ಹಕ್ಕಿದೆ: ಕೇರಳ ಹೈಕೋರ್ಟ್‌

ಮದುವೆಯಾಗದ ಮಹಿಳೆ ಹಾಗೂ ಅತ್ಯಾಚಾರ ಸಂತ್ರಸ್ಥೆಯರಿಗೆ ಹುಟ್ಟಿದ ಮಕ್ಕಳಿಗೂ ಈ ದೇಶದಲ್ಲಿ ಬದುಕುವ ಹಕ್ಕಿದೆ, ಅವರೂ ಸಹ ಈ ದೇಶದ ನಾಗರಿಕರಾಗುತ್ತಾರೆ. ಈ ಹಿನ್ನೆಲೆ ಅಂತಹ ಮಕ್ಕಳೂ ಸಹ ಖಾಸಗಿತನ, ಸ್ವಾತಂತ್ರ್ಯ ಮತ್ತು ಘನತೆಯ ಮೂಲಭೂತ ಹಕ್ಕುಗಳೊಂದಿಗೆ ಈ ದೇಶದಲ್ಲಿ ವಾಸ ಮಾಡಬಹುದೆಂದು ಕೇರಳ ಹೈಕೋರ್ಟ್‌ ಹೇಳಿದೆ. 

son of an unwed women too a citizen of india kerala highcourt ash
Author
Bangalore, First Published Jul 24, 2022, 3:29 PM IST

ಹಲವು ಮಕ್ಕಳನ್ನು ಕಸದ ತೊಟ್ಟಿಗೆ ಎಸೆಯುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುತ್ತದೆ. ಇಂತಹ ಘಟನೆಗಳನ್ನು ನೋಡಿದಾಗ ಅಥವಾ ಆ ಬಗ್ಗೆ ಓದಿದಾಗ ನಿಮ್ಮ ಮನಸ್ಸನ್ನು ಸ್ವಲ್ಪವಾದರೂ ಕಲಕುತ್ತಲ್ಲವೇ..? ಆದರೆ, ಇನ್ಮುಂದೆ ಇಂತಹ ಪ್ರಕರಣಗಳು ಕಡಿಮೆಯಾಗಬಹುದು. ಯಾಕೆ ಅಂತೀರಾ..? ಕೇರಳ ಹೈಕೋರ್ಟ್‌ ನೀಡಿರುವ ಈ ತೀರ್ಪನ್ನು ನೋಡಿ. 

ಮದುವೆಯಾಗದ ಮಹಿಳೆ ಹಾಗೂ ಅತ್ಯಾಚಾರ ಸಂತ್ರಸ್ಥೆಯರಿಗೆ ಹುಟ್ಟಿದ ಮಕ್ಕಳಿಗೂ ಈ ದೇಶದಲ್ಲಿ ಬದುಕುವ ಹಕ್ಕಿದೆ, ಅವರೂ ಸಹ ಈ ದೇಶದ ನಾಗರಿಕರಾಗುತ್ತಾರೆ. ಈ ಹಿನ್ನೆಲೆ ಅಂತಹ ಮಕ್ಕಳೂ ಸಹ ಖಾಸಗಿತನ, ಸ್ವಾತಂತ್ರ್ಯ ಮತ್ತು ಘನತೆಯ ಮೂಲಭೂತ ಹಕ್ಕುಗಳೊಂದಿಗೆ ಈ ದೇಶದಲ್ಲಿ ವಾಸ ಮಾಡಬಹುದೆಂದು ಕೇರಳ ಹೈಕೋರ್ಟ್‌ ಹೇಳಿದೆ. 

ಅಲ್ಲದೆ, ಮದುವೆಯಾಗದ ಮಹಿಳೆಯೊಬ್ಬರಿಗೆ ಜನಿಸಿದ ವ್ಯಕ್ತಿಯ ಜನನ ಪ್ರಮಾಣ ಪತ್ರದಲ್ಲಿ, ಗುರುತಿನ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳಲ್ಲಿ ತನ್ನ ತಾಯಿಯ ಹೆಸರನ್ನು ಸೇರಿಸಲು ಹೈಕೋರ್ಟ್‌ ಅನುಮತಿ ನೀಡಿದೆ. ಜುಲೈ 19ರಂದು ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಜಸ್ಟೀಸ್‌ ಪಿ.ವಿ. ಕುನ್ಹಿಕೃಷ್ಣನ್‌ ಈ ಆದೇಶ ನೀಡಿದ್ದಾರೆ. ಮದುವೆಯಾಗದ ತಾಯಿಗೆ ಹುಟ್ಟಿದ ಮಗು ಸಹ ಈ ದೇಶದ ನಾಗರಿಕರು ಮತ್ತು ಅವನು / ಅವಳಿಗೆ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಯಾರಿಂದಲೂ ಕಿತ್ತುಕೊಳ್ಳಲು ಆಗಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.
 
 “ಅವಿವಾಹಿತ ತಾಯಂದಿರ ಮಕ್ಕಳು ಮತ್ತು ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ಮಕ್ಕಳು ಸಹ ಖಾಸಗಿತನ, ಸ್ವಾತಂತ್ರ್ಯ ಮತ್ತು ಘನತೆಯ ಮೂಲಭೂತ ಹಕ್ಕುಗಳೊಂದಿಗೆ ಈ ದೇಶದಲ್ಲಿ ಬದುಕಬಹುದು. ಯಾರೂ ಅವರ ವೈಯಕ್ತಿಕ ಜೀವನದಲ್ಲಿ ನುಸುಳಲು ಸಾಧ್ಯವಿಲ್ಲ, ಮತ್ತು ಇದು ಸಂಭವಿಸಿದಲ್ಲಿ, ಈ ದೇಶದ ಸಾಂವಿಧಾನಿಕ ನ್ಯಾಯಾಲಯವು ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ’’ ಎಂದು ಆದೇಶದಲ್ಲಿ ಹೇಳಲಾಗಿದೆ.

ಅವಿವಾಹಿತ ತಾಯಿಯ ಮಗನಾಗಿರುವ ಅರ್ಜಿದಾರರ ತಂದೆಯ ಹೆಸರು ಮೂರು ದಾಖಲೆಗಳಲ್ಲಿ ವಿಭಿನ್ನವಾಗಿತ್ತು. ಈ ಹಿನ್ನೆಲೆ ಅರ್ಜಿದಾರರಿಗೆ ಸಂಬಂಧಿಸಿದಂತೆ ಕಚೇರಿಯಲ್ಲಿ ನಿರ್ವಹಿಸಲಾದ ಜನನ ನೋಂದಣಿಯಿಂದ ತಂದೆಯ ಹೆಸರನ್ನು ತೆಗೆದುಹಾಕಲು ಮತ್ತು ಅರ್ಜಿದಾರರು ಅಂತಹ ವಿನಂತಿಯನ್ನು ಸಲ್ಲಿಸಿದರೆ ತಾಯಿಯ ಹೆಸರನ್ನು ಮಾತ್ರ ಸಿಂಗಲ್‌ ಪೇರೆಂಟ್‌ ಎಂದು ತೋರಿಸುವ ಪ್ರಮಾಣಪತ್ರವನ್ನು ನೀಡುವಂತೆ ನ್ಯಾಯಾಲಯವು ಜನನ ಮತ್ತು ಮರಣಗಳ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ.        

"ಅವನು/ಅವಳು ಅವಿವಾಹಿತ ತಾಯಿಗೆ ಮಾತ್ರವಲ್ಲದೆ ಈ ಮಹಾನ್ ದೇಶ ಭಾರತಕ್ಕೆ ಸಹ ಮಗ/ಮಗಳು" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಅಲ್ಲದೆ, ಕೇರಳ ರಾಜ್ಯವು ಎಲ್ಲಾ ರೀತಿಯ ನಾಗರಿಕರನ್ನು ಅವರ ಗುರುತು ಮತ್ತು ಗೌಪ್ಯತೆಯನ್ನು ಬಹಿರಂಗಪಡಿಸದೆ ಇತರ ನಾಗರಿಕರಿಗೆ ಸಮಾನವಾಗಿ ರಕ್ಷಿಸಬೇಕು. ಇಲ್ಲದಿದ್ದರೆ, ಅವರು ಊಹಿಸಲಾಗದ ಮಾನಸಿಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ ಎಂದು ಸಹ ನ್ಯಾಯಾಲಯ ಹೇಳಿದೆ.

"ತಂದೆ-ತಾಯಿಯ ಎಲ್ಲಿಲ್ಲದ ಅವಮಾನದಿಂದ ತನ್ನ ಬದುಕಿಗೆ ಶಾಪ ಹಾಕುವ ಕರ್ಣನಂಥ ಪಾತ್ರಗಳಿಲ್ಲದ ಸಮಾಜ ನಮಗೆ ಬೇಕು. ಮಹಾಭಾರತದಲ್ಲಿರುವ ನಿಜವಾದ ನಾಯಕ ಮತ್ತು ಹೋರಾಟಗಾರನಾಗಿದ್ದ ವೀರ ‘ಕರ್ಣ’ ನಮಗೆ ಬೇಕು. ಸಂವಿಧಾನ ಮತ್ತು ಸಾಂವಿಧಾನಿಕ ನ್ಯಾಯಾಲಯಗಳು ಅವರೆಲ್ಲರನ್ನೂ ರಕ್ಷಿಸುತ್ತವೆ ಮತ್ತು ಹೊಸ ಯುಗದ 'ಕರ್ಣರು' ಇತರ ಯಾವುದೇ ನಾಗರಿಕರಂತೆ ಘನತೆ ಮತ್ತು ಹೆಮ್ಮೆಯಿಂದ ಬದುಕಬಹುದು" ಎಂದು ನ್ಯಾಯಮೂರ್ತಿ ಕುನ್ಹಿಕೃಷ್ಣನ್‌ ಹೇಳಿದರು.

ಇನ್ನು, ಅಂತಹ ವ್ಯಕ್ತಿಗಳ ಅಧಿಕೃತ ದಾಖಲೆಗಳು ಮತ್ತು ಡೇಟಾಬೇಸ್‌ಗಳಲ್ಲಿ ತಂದೆಯ ಹೆಸರನ್ನು ತೆಗೆದುಹಾಕುವಂತೆ ಶಿಕ್ಷಣ ಇಲಾಖೆ, ಹೈಯರ್ ಸೆಕೆಂಡರಿ ಪರೀಕ್ಷಾ ಮಂಡಳಿ, ಯುಐಡಿಎಐ, ಐಟಿ ಇಲಾಖೆ, ಪಾಸ್‌ಪೋರ್ಟ್ ಅಧಿಕಾರಿ, ಭಾರತೀಯ ಚುನಾವಣಾ ಆಯೋಗ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಕೇರಳ ಹೈಕೋರ್ಟ್‌ ಸೂಚಿಸಿದೆ. 

Follow Us:
Download App:
  • android
  • ios