ವಿಜಯವಾಡ(ಜು.05): ಕೊರೋನಾ ಸೋಂಕಿತ ತಾಯಿಯಿಂದ ಮನೆಮಂದಿಗೆಲ್ಲಾ ಸೋಂಕು ಹರಡುತ್ತದೆಂದು 80 ವರ್ಷದ ವೃದ್ಧ ತಾಯಿಯನ್ನು ಸ್ವತಃ ಪುತ್ರನೇ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಚೇರ್ಲಾದಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಗೋವಾದ ಮಗಳ ಮನೆಯಿಂದ ಮಚೇರ್ಲಾಗೆ ವಾಪಸ್ಸಾಗಿದ್ದ ವಯೋವೃದ್ಧೆಗೆ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ಆಸ್ಪತ್ರೆಗೆ ಕೊಂಡೊಯ್ದಾಗ ಸೋಂಕು ದೃಢಪಟ್ಟಿತ್ತು. ತಾಯಿಯಿಂದ ಮನೆಮಂದಿಗೆಲ್ಲಾ ಕೊರೋನಾ ತಗುಲಬಹುದು ಎಂಬ ಭೀತಿಯಲ್ಲಿ ಪುತ್ರ ವೆಂಕಟೇಶ್ವರ ರಾವ್‌ ಎಂಬಾತ ತಾಯಿಯನ್ನು ಮಚೇರ್ಲಾ ಬಸ್‌ ನಿಲ್ದಾಣದ ಬೆಂಚಿನ ಮೇಲೆ ಕುಳ್ಳಿರಿಸಿ, ನೀರು ತರುವುದಾಗಿ ಹೇಳಿ ಕಾಲ್ಕಿತ್ತಿದ್ದಾನೆ.

ಪ್ರಯಾಣಿಕರು ವೃದ್ಧೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆಕೆಯನ್ನು ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಲಾಗಿದೆ.