ನವದೆಹಲಿ[ಡಿ.26]: ದೆಹಲಿ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಗುರುವಾರ ಬೆಳಗ್ಗೆ ಕಂಕಣ ಸೂರ್ಯ ಗ್ರಹಣ ಗೋಚರಿಸಿದೆ.ಬೆಳಗ್ಗೆ 8 ಗಂಟೆ 4 ನಿಮಿಷಕ್ಕೆ ಆರಂಭವಾದ ಗ್ರಹಣ ಮಧ್ಯಾಹ್ನ ಸುಮಾರು 2 ಗಂಟೆ 52 ನಿಮಿಷಕ್ಕೆ ಕೊನೆಯಾಗಿದೆ. ಜನ ಸಾಮಾನ್ಯರಂತೆ ಪ್ರಧಾನಿ ಮೋದಿಯೂ ವರ್ಷದ ಕೊನೆಯ ಸೂರ್ಯ ಗ್ರಹಣ ವೀಕ್ಷಿಸಲು ಅತ್ಯಂತ ಕುತೂಹಲದಿಂದಿದ್ದರು. ಆದರೆ ಇದು ಸಾಧ್ಯವಾಗಿಲ್ಲ. ಈ ನಡುವೆ ಪಿಎಂ ಮೋದಿ ತಮ್ಮ ಫೋಟೋಗಳನ್ನು ಟ್ವೀಟ್ ಮಾಡಿದ್ದರು. ಆದರೆ ನೆಟ್ಟಿಗರು ಅವರು ಧರಿಸಿದ್ದ ಗ್ಲಾಸಸ್ ಬೆಲೆ ಎಷ್ಟೆಂದು ಕಂಡು ಹಿಡಿದು ಟ್ರೋಲ್ ಮಾಡಲಾರಂಭಿಸಿದ್ದಾರೆ.

ಹೌದು ಕಂಕಣ ಸೂರ್ಯ ಗ್ರಹಣ ವೀಕ್ಷಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾತರದಿಂದ ಕಾಯುತ್ತಿದ್ದರು. ಆದರೆ ಇಷ್ಟೆಲ್ಲಾ ತಯಾರಿ ನಡೆಸಿದ್ದರೂ ಸೂರ್ಯಗ್ರಹಣ ವೀಕ್ಷಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಸಂಬಂಧ ಟ್ವೀಟ್ ಮಾಡಿದ್ದ ಮೋದಿ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡು 'ಅನೇಕ ಭಾರತೀಯರಂತೆ ನಾನೂ #solareclipse2019 ವೀಕ್ಷಿಸಲು ಉತ್ಸಾಹಿತನಾಗಿದ್ದೆ. ಆದರೆ ಮೋಡಗಳಿದ್ದುದರಿಂದ ವೀಕ್ಷಿಸಲು ಸಾಧ್ಯವಾಗಿಲ್ಲ. ಆದರೆ ನಾನು ಲೈವ್ ಸ್ಟ್ರೀಮ್ ಮೂಲಕ ಕೇರಳದಲ್ಲಿ ಗ್ರಹಣ ವೀಕ್ಷಿಸಿದ್ದೇನೆ' ಎಂದಿದ್ದಾರೆ.

ಮೋದಿ ಈ ಟ್ವೀಟ್ ಮಾಡಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಕೆಲವರು ಅವರ ಫೋಟೋಗಳನ್ನು ಮೀಮ್ ಮಾಡಲಾರಂಭಿಸಿದ್ದರೆ, ಇನ್ನು ಕೆಲವರು ಅವರು ಧರಿಸಿದ್ದ ಗ್ಲಾಸ್ ಬೆಲೆ ಎಷ್ಟು ಎಂಬ ಹುಡುಕಾಟದಲ್ಲಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಒಬ್ಬಾತ 'ಒಂದು ವೇಳೆ ನೀವು ಜರ್ಮನ್ ಕನಸು ಕಾಣುತ್ತಿದ್ದರೆ, ಅದನ್ನು ಜರ್ಮನ್ ಗ್ಲಾಸಸ್ ಮೂಲಕ ವೀಕ್ಷಿಸಿ ಮೇಬಾಕ್ ಮೊತ್ತ 1.6 ಲಕ್ಷ ರೂಪಾಯಿ' ಎಂದಿದ್ದಾರೆ. ಅಲ್ಲದೇ ಹ್ಯಾಷ್ ಟ್ಯಾಗ್ 'ಬ್ರ್ಯಾಂಡೆಡ್ ಫಕೀರ್' ಎಂದೂ ಬರೆದಿದ್ದಾರೆ. ಇದರೊಂದಿಗೆ ಮೂರು ಫೋಟೋಗಳ:ನ್ನೂ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಮೋದಿನ ಮೋಡಗಳೆಡೆ ನೋಡುತ್ತಿದ್ದಾರೆ. ಎರಡನೇ ಫೋಟೋದಲ್ಲಿ ಮೋದಿ ಗ್ಲಾಸಸ್ ಮೇಲಿರುವ ಮೆಕಾಬ್ ಬ್ರ್ಯಾಂಡ್ ಹೈಲೈಟ್ ಮಾಡಲಾಗಿದೆ. ಇನ್ನು ಮೂರನೇ ಫೋಟೋದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿಯುಳ್ಳ ಸ್ಕ್ರೀನ್ ಶಾಟ್ ಹಾಕಲಾಗಿದೆ. ಇದರ ಅನ್ವಯ ಇದರ ಬೆಲೆ 2159 ಡಾಲರ್ ಅಂದರೆ 1 ಲಕ್ಷದ 53 ಸಾವಿರ.

ಇವರ ಈ ಟ್ವೀಟ್ ಗೆ ಅನೇಕರು ಪ್ರತಿಕ್ರಿಯಿಸಿ ಕಮೆಂಟ್ ಮಾಡಿದ್ದಾರೆ.