ನವದೆಹಲಿ(ಸೆ.12): ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ (80) ಶುಕ್ರವಾರ ದೆಹಲಿಯ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಪಿತ್ತಜನಕಾಂಗ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಲಿವರ್‌ ಆ್ಯಂಡ್‌ ಬೈಲರಿ ಸೈನ್ಸ್‌ಸ್‌ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮೂಲತಃ ಆಂಧ್ರ ಪ್ರದೇಶದವರಾದ ಅವರು ತಮ್ಮ ಹೆಸರು ಮತ್ತು ಜಾತಿ, ಧರ್ಮವನ್ನು ತ್ಯಜಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.

ಜೀತ ಕಾರ್ಮಿಕರ ಮುಕ್ತಿ ಮೋರ್ಚಾವನ್ನು ಸ್ಥಾಪಿಸಿ ಜೀತ ಕಾರ್ಮಿಕ ಪದ್ಧತಿಯ ವಿರುದ್ಧದ ಹೊರಾಟದಿಂದ ಸ್ವಾಮಿ ಅಗ್ನಿವೇಶ್‌ ಇಡೀ ದೇಶದ ಗಮನ ಸೆಳೆದಿದ್ದರು. ಸಾಮಾಜಿಕ ಹೋರಾಟ ರಾಜಕೀಯ ಪ್ರವೇಶಕ್ಕೂ ದಾರಿ ಮಾಡಿಕೊಟ್ಟಿತು.

1977ರಲ್ಲಿ ಹರ್ಯಾಣ ವಿಧನಸಭೆಗೆ ಆಯ್ಕೆ ಆಗಿದ್ದ ಅಗ್ನಿವೇಶ್‌, ಎರಡು ವರ್ಷಗಳ ಕಾಲ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿಯೂ ಪಾಲ್ಗೊಂಡಿದ್ದರು. ಅಲ್ಲದೇ ಹಿಂದಿ ರಿಯಾಲಿಟಿ ಶೋ ಬಿಗ್‌ ಬಾಸ್‌ನಲ್ಲಿಯೂ ಪಾಲ್ಗೊಂಡು ಅಗ್ನಿವೇಶ್‌ ಸುದ್ದಿಯಾಗಿದ್ದರು.