ಅಮರಾವತಿ(ಸೆ. 19): ಕೆಲಸದ ಒತ್ತಡ ಹಚ್ಚಿದಾಗ ಚಿಕ್ಕದೊಂದು ಬ್ರೇಕ್ ಪಡೆಯಬೇಕೆಂಬ     ಫೀಲ್ ಹುಟ್ಟಿಕೊಳ್ಳುವುದು ಸಹಜ, ಹೀಗಿರುವಾಗ ತಂಪಾದ ಎಸಿ ಗಾಳಿ ಬೀಸುತ್ತಿದ್ದರೆ? ನಿದ್ದೆಗೆ ಜಾರದಂತೆ ತಡೆಯಲು ಸಾಧ್ಯವೇ ಇಲ್ಲ. ಸದ್ಯ ಇದೇ ಪಸ್ಥಿತಿ ಕಳ್ಳನೊಬ್ಬನಿಗೆ ಎದುರಾಗಿದೆ. ಎಸಿ ಗಾಳಿಗೆ ಮನಸೋತ ಈ ಕಳ್ಳ, ಕನ್ನ ಹಾಕಲು ಬಂದ ಮನೆಯಲ್ಲೇ ನಿದ್ದೆಗೆ ಜಾರಿದ್ದಾನೆ. 

ಹೌದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ 22 ವರ್ಷದ ಕಳ್ಳನೊಬ್ಬ ಕನ್ನ ಹಾಕಲು ಬಂದ ಮನೆಯಲ್ಲಿ ಎಸಿ ಹಾಕಿದ್ದ ಕೋಣೆಯಲ್ಲೇ ನಿದ್ದೆಗೆ ಜಾರಿದ್ದಾನೆ. ಸದ್ಯ ಈ ಕಳ್ಳನನ್ನು ಬಾಬು ಎಂದು ಗುರುತಿಸಲಾಗಿದ್ದು, ಈತ ಪೆಟ್ರೋಲ್ ಬಂಕ್ ಮಾಲೀಕನೊಬ್ಬನ ಮನೆಗೆ ಕನ್ನ ಹಾಕಲು ಬಂದಿದ್ದ. ಈತ ಕಳ್ಳತನಕ್ಕೂ ಮೊದಲು ಈ ಮನೆ ಬಳಿ ತೆರಳಿ ಎಲ್ಲಾ ಬಗೆಯ ಯೋಜನೆ ಹಾಕಿಕೊಂಡಿದ್ದ. 

ಇಷ್ಟೆಲ್ಲಾ ನಡೆದ ಬಳಿಕ ಆತ ಸೆಪ್ಟೆಂಬರ್ 12ರಂದು ಇಲ್ಲಿ ಕಳ್ಳತನ ಮಾಡಲು ಯೋಜನೆ ಹಾಕಿಕೊಂಡಿದ್ದ. ತನ್ನ ಯೋಜನೆಯಂತೆ ಈತ ಬೆಳಗ್ಗಿನ ಜಾವ  4 ಗಂಟೆಗೆ ಶಕ್ತಿ ವೆಂಕಟ ರೆಡ್ಡಿ ಮನೆಗೆ  ಎಂಟ್ರಿ ಕೊಟ್ಟಿದ್ದ. ಎಸಿ ರೂಂಗೆ ಎಂಟ್ರಿ ಕೊಡುವವರೆಗೂ ಎಲ್ಲವೂ ಅಂದುಕೊಂಡಂತೆ ನಡೆದಿತ್ತು. ಆದರೆ ತಂಪಾದ ಗಾಳಿ ಬೀಸುತ್ತಿದ್ದಂತೆಯೇ ಸುಸ್ತಾಗಿದ್ದ ಬಾಬು ಅಲ್ಲೇ ನಿದ್ದೆಗೆ ಜಾರಿದ್ದ. 

ಕೆಲ ಸಮಯ ರೆಸ್ಟ್ ತೆಗೆದುಕೊಂಡು ತೆರಳುವುದಾಗಿ ಯೋಚಿಸಿದ ಕಳ್ಳ ಮಾಲೀಕನ ಬೆಡ್‌ ಮೇಲೇ ನಿದ್ದೆಗೆ ಜಾರಿದ. ಆದರೆ ಎಲ್ಲವೂ ಉಲ್ಟಾ ಹೊಡೆದಿತ್ತು. ಕೆಲ ಮಯ ಅಂದುಕೊಂಡ ಕಳ್ಳನಿಗೆ ಗಾಢವಾಗಿ ನಿದ್ದೆ ಆವರಿಸಿತ್ತು. 

ಆದರೆ ಕಳ್ಳನ ಗೊರಕೆ ಸದ್ದಿನಿಂದ ಎಚ್ಚೆತ್ತ ಮನೆ ಮಂದಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಬೆಳಗ್ಗೆ 7.30 ರ ಸಮಯಕ್ಕೆ ತಲುಪಿ ಬಾಬುನನ್ನು ಬಂಧಿಸಿದ್ದಾರೆ.