ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ 14 ದಿನ ನ್ಯಾಯಾಂಗ ಬಂಧನ, ಆಂಧ್ರದಲ್ಲೇ ರಾಜಕೀಯ ಸಂಚಲನ!
ಕೌಶಲ್ಯಾಭಿವೃದ್ಧಿ ಅಕ್ರಮದಲ್ಲಿ ಅರೆಸ್ಟ್ ಆಗಿರುವ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಸಿಬಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೊಪ್ಪಿಸುತ್ತಿದ್ದಂತೆ ಆಂಧ್ರದಲ್ಲಿ ಮತ್ತೆ ರಾಜಕೀಯ ಸಂಚಲನ ಶುರುವಾಗಿದೆ.
ವಿಜಯವಾಡ(ಸೆ.10) ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದ ವೇಳೆ ನಡೆದಿದೆ ಎನ್ನಲಾದ ಕೌಶಲ್ಯಾಭಿವೃದ್ಧಿ ಅಕ್ರಮದ ಕುಣಿಕೆ ಬಿಗಿಯಾಗುತ್ತಿದೆ. ಕೌಶಲ್ಯಾಭಿವೃದ್ಧಿಗೆ ನೀಡಿದ್ದ 3,300 ಕೋಟಿ ರೂಪಾಯಿ ಅಕ್ರಮ ಆರೋಪ ಹೊತ್ತಿರುವ ಚಂದ್ರಬಾಬು ನಾಯ್ಡುವನ್ನು ಆಂಧ್ರ ಸಿಐಡಿ ಅಧಿಕಾರಿಗಳು ನಿನ್ನೆ(ಸೆ.09) ಬಂಧಿಸಿದ್ದರು. ಇಂದು ಎಸಿಬಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇದೀಗ ಎಸಿಬಿ ಕೋರ್ಟ್ ಚಂದ್ರಬಾಬು ನಾಯ್ಡುರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತೆಲುಗು ದೇಶ ಪಾರ್ಟಿ ಮುಖ್ಯಸ್ಥನ ಬಂಧನ ಕಾರ್ಯಕರ್ತರು ಹಾಗೂ ನಾಯಕರನ್ನು ಕೆರಳಿಸಿದೆ. ಆಂಧ್ರ ಪ್ರದೇಶದಲ್ಲಿ ಪ್ರತಿಭಟನೆ ಜೋರಾಗಿದೆ. ಚಂದ್ರಬಾಬು ಬಂಧನದಿಂದ ಹಲವು ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಇದೀಗ ನ್ಯಾಯಂಗ ಬಂಧನ ಆದೇಶದ ಬಳಿಕ ಮತ್ತೆ ಪ್ರತಿಭಟನೆ ಹೆಚ್ಚಾಗಿದೆ. ಬಂಧನದ ವೇಳೆ ಟಿಡಿಪಿ ಕಾರ್ಯಕರ್ತರು ಹಾಗೂ ಸಿಐಡಿ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿತ್ತು.
ರಾತ್ರೋ ರಾತ್ರಿ ಬೀದಿಗೆ ಬಂದ ನಟ ಪವನ್ ಕಲ್ಯಾಣ್!
ಪ್ರಕರಣ ಗಂಭೀರವಾಗಿದೆ. ದಾಖಲೆಗಳು ಚಂದ್ರಬಾಬು ನಾಯ್ದು ವಿರುದ್ಧವಾಗಿದೆ. ಅಕ್ರಮ ಸಾಬೀತಾದರೆ ಟಿಡಿಪಿ ನಾಯಕಗೆ 10 ವರ್ಷ ಜೈಲು ಶಿಕ್ಷೆಯಾಗಲಿದೆ. 2014ರಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ಆಗಿದ್ದಾಗ ಸೀಮನ್ಸ್ ಮತ್ತು ಡಿಸೈನ್ ಟೆಕ್ ಕಂಪನಿಗಳ ತಾಂತ್ರಿಕ ಸಹಯೋಗದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಆಂಧ್ರದ ವಿವಿಧೆಡೆ ಸ್ಥಾಪಿಸುವ ನಿರ್ಣಯ ಕೈಗೊಂಡಿದ್ದರು. ಇದು 3,300 ಕೋಟಿ ರು. ಯೋಜನೆ ಆಗಿತ್ತು. ಇದರಲ್ಲಿ ಶೇ.90ರಷ್ಟುಹಣವನ್ನು ಸೀಮನ್ಸ್ ಹಾಕಬೇಕಿತ್ತು.
ಬಾಕಿ ಶೇ.10ರಷ್ಟುತನ್ನ ಪಾಲಿನ ಹಣವಾದ 371 ಕೋಟಿ ರು.ಗಳನ್ನು ಸರ್ಕಾರ ನೀಡಿತ್ತು. ಆದರೆ ಸೀಮನ್ಸ್ ತನ್ನ ಪಾಲಿನ ಹಣವನ್ನೇ ಹಾಕಲಿಲ್ಲ. ಆದರೂ ಸರ್ಕಾರವು ತನ್ನ ಪಾಲಿನ 371 ಕೋಟಿ ರು.ನಲ್ಲಿ ಕೆಲವೇ ಕೆಲವು ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿತು. ಮಿಕ್ಕ ಕೇಂದ್ರಗಳನ್ನು ಸ್ಥಾಪಿಸದೇ ಕೇವಲ ಲೆಕ್ಕಪತ್ರದಲ್ಲಿ ‘ಸ್ಥಾಪಿಸಲಾಗಿದೆ’ ಎಂದು ತೋರಿಸಿ ಹಣವನ್ನು ನಕಲಿ ಕಂಪನಿಗಳಿಗೆ ವರ್ಗಾಯಿಸಿ ದುರುಪಯೋಗ ಮಾಡಿಕೊಂಡಿತ್ತು ಎನ್ನಲಾಗಿತ್ತು. ಚಂದ್ರಬಾಬು ನಾಯ್ಡು, ಅಂದಿನ ಟಿಡಿಪಿ ಅಧ್ಯಕ್ಷ ಟಿ. ಅಚ್ಚಂನಾಯ್ಡು ಮತ್ತು ಇತರ ಕೆಲವರು ಇದರ ಫಲಾನುಭವಿಗಳು ಎಂಬ ಆರೋಪ ಕೇಳಿಬಂದಿತ್ತು.
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ