ತಿರುವನಂತಪುರಂ(ಡಿ.23): ದೇಶದೆಲ್ಲೆಡೆ ಭಾರೀ ಸಂಚಲನಕ್ಕೆ ಕಾಣವಾಗಿದ್ದ ಕೇರಳದ 21 ವರ್ಷದ ಸಿಸ್ಟರ್‌ ಅಭಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಥೋಲಿಕ್‌ ಪಾದ್ರಿ ಹಾಗೂ ಸನ್ಯಾಸಿನಿಯೊಬ್ಬಳನ್ನು ದೋಷಿಗಳೆಂದು ತೀರ್ಪು ನೀಡಿದ್ದ ಸಿಬಿಐ ಕೋರ್ಟ್‌, ಈ ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 

ಏನಿದು ಪ್ರಕರಣ?

ಕೊಟ್ಟಾಯಂನ ಚಚ್‌ರ್‍ವೊಂದರಲ್ಲಿ ನಡೆಯುತ್ತಿದ್ದ ಕೆಲವು ಅನೈತಿಕ ಚಟುವಟಿಕೆಗಳನ್ನು ಸಿಸ್ಟರ್‌ ಅಭಯಾ ಕಣ್ಣಾರೆ ಕಂಡಿದ್ದರು. ಹೀಗಾಗಿ ಸಾಕ್ಷ್ಯ ನಾಶಪಡಿಸಲು ಅಭಯಾ ಮೇಲೆ ಕೊಡಲಿಯ ಹಿಡಿಕೆಯಿಂದ ಹೊಡೆದು ಹತ್ಯೆ ಹತ್ಯೆ ಮಾಡಲಾಗಿತ್ತು. 1992ರಲ್ಲಿ ಕೊಟ್ಟಾಯಂನ ಕಾನ್ವೆಂಟ್‌(ಧಾರ್ಮಿಕ ಶಿಕ್ಷಣ ಕೇಂದ್ರ)ದಲ್ಲಿ ಸಿಸ್ಟರ್‌ ಅಭಯಾ ಮೃತ ದೇಹ ಪತ್ತೆ ಆಗಿತ್ತು. ಮರಣೋತ್ತರ ಪರೀಕ್ಷೆಯ ವೇಳೆ ಅಭಯಾ ಮೇಲೆ ದಾಳಿ ನಡೆದಿರುವುದು ಪತ್ತೆ ಆಗಿತ್ತು. ಆದರೆ, ಪ್ರಕರಣವನ್ನು ಮುಚ್ಚಿಹಾಕುವ ಸಲುವಾಗಿ ಇದೊಂದು ಆತ್ಮಹತ್ಯೆ ಎಂಬ ವರದಿ ನೀಡಿ ಸ್ಥಳೀಯ ಪೊಲೀಸರು ತನಿಖೆಯನ್ನು ಕೊನೆಗೊಳಿಸಿದ್ದರು.

ಬಳಿಕ ಪೋಷಕರ ವಿರೋಧದ ಕಾರಣದಿಂದ 2008ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಈ ಮಧ್ಯೆ ನ್ಯಾಯಕ್ಕಾಗಿ ವರ್ಷನುಗಟ್ಟಲೆ ಕಾದ ಅಭಯಾ ಪೋಷಕರು ಕೆಲ ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಕಳೆದ ವರ್ಷ ಆ.26ರಿಂದ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಆರಂಭವಾಗಿ ತೀರ್ಪು ಇದೀಗ ಹೊರಬಿದ್ದಿದೆ.