ಗ್ಯಾಂಗ್ಟಕ್‌(ನ.05): ಕೊರೋನಾ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ಪಟಾಕಿಗಳ ಮಾರಾಟಕ್ಕೆ ನಿಷೇಧ ಹೇರಿದ ಬೆನ್ನಲ್ಲೇ, ಈಶಾನ್ಯದ ಪುಟ್ಟರಾಜ್ಯ ಸಿಕ್ಕಿಂ ಸರ್ಕಾರವೂ ರಾಜ್ಯಾದ್ಯಂತ ಪಟಾಕಿಗಳ ಮೇಲೆಯೇ ನಿಷೇಧ ಹೇರಿದೆ.

ವಿಪತ್ತು ನಿರ್ವಹಣಾ ಕಾಯ್ದೆ-2005ರಡಿ ರಾಜ್ಯಾದ್ಯಂತ ಪಟಾಕಿಗಳ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮುಂದಿನ ಆದೇಶ ಬರುವವರೆಗೂ ಯಾರೂ ಸಹ ಪಟಾಕಿ ಸಿಡಿಸಬಾರದೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಬುಧವಾರ ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪಟಾಕಿ ನಿಷೇಧ ಕ್ರಮವನ್ನು ಸಮರ್ಥಿಸಿಕೊಂಡಿರುವ ಸರ್ಕಾರ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆಮುಖವಾಗುತ್ತಿದೆ. ಆದರೆ, ಪಟಾಕಿ ಸಿಡಿಸುವಿಕೆಯಿಂದ ಆಗುವ ಪರಿಸರ ಮಾಲಿನ್ಯವು ಈಗಷ್ಟೇ ಕೊರೋನಾದಿಂದ ಗುಣಮುಖರಾಗುತ್ತಿರುವವರ ಮೇಲೆ ಭಾರೀ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

ಹೀಗಾಗಿ, ಪಟಾಕಿ ನಿಷೇಧ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶದ ಪಾಲನೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.