ನವದೆಹಲಿ(ಜ.04): ‘ಕೋವಿಶೀಲ್ಡ್‌’ ಕೊರೋನಾ ಲಸಿಕೆಗೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸೀರಂ ಇನ್ಸ್‌ಟಿಟ್ಯೂಟ್‌ ಮುಖ್ಯಸ್ಥ ಅದರ್‌ ಪೂನಾವಾಲಾ, ಭಾರತ ಸರ್ಕಾರಕ್ಕೆ 200 ರು. ದರಕ್ಕೆ ಹಾಗೂ ಖಾಸಗಿಯಾಗಿ ಜನರಿಗೆ 1000 ರು.ಗೆ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಲಸಿಕೆಗೆ ಅನುಮತಿ ಸಿಕ್ಕ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಪೂನಾವಾಲಾ, ‘ಭಾರತ ಸರ್ಕಾರವು ನಮ್ಮೊಂದಿಗೆ ಗುತ್ತಿಗೆಗೆ ಸಹಿ ಹಾಕುತ್ತಿದ್ದಂತೆಯೇ 7-10 ದಿನಗಳಲ್ಲಿ ಲಸಿಕೆ ವಿತರಣೆಗೆ ಸಿದ್ಧರಿದ್ದೇವೆ. ಸೀರಂ ಇನ್ಸ್‌ಟಿಟ್ಯೂಟ್‌ ಈಗಾಗಲೇ 5 ಕೋಟಿ ಲಸಿಕೆಗಳನ್ನು ಸಿದ್ಧಪಡಿಸಿ ಇರಿಸಿಕೊಂಡಿದ್ದು, ಇವುಗಳಿಗೆ ಅನುಮೋದನೆ ಸಿಕ್ಕಿದೆ’ ಎಂದರು.

‘ಪ್ರತಿ ನಿಮಿಷಕ್ಕೆ 5 ಸಾವಿರ ಡೋಸ್‌ಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ನಮ್ಮ ಕಂಪನಿಗೆ ಇದೆ. ಮಾಚ್‌ರ್‍ಗೆ ಮಾಸಿಕ 10 ಕೋಟಿ ಲಸಿಕೆ ತಯಾರಿಸುವ ಗುರಿ ಇರಿಸಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ನಾವು ಲಸಿಕೆ ಡಿಪೋವನ್ನು ಸ್ಥಾಪಿಸಲಿದ್ದೇವೆ. ಅಲ್ಲಿಂದ ರಾಜ್ಯಗಳು ಲಸಿಕೆಯನ್ನು ಕೊಂಡೊಯ್ಯಬಹುದು’ ಎಂದರು.

ಇದೇ ವೇಳೆ, ‘ವಿದೇಶಕ್ಕೂ ಲಸಿಕೆ ರಫ್ತು ಮಾಡಲು ಸಿದ್ಧರಿದ್ದೇವೆ. ಭಾರತ ಸರ್ಕಾರದ ಅನುಮತಿಗೆ ಕೋರಲಿದ್ದು, ಅನುಮತಿ ಸಿಕ್ಕ ಬಳಿಕ ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಹೊಂದಿರುವ 68 ದೇಶಗಳೊಗೆ ಲಸಿಕೆ ರಫ್ತು ಮಾಡಲಾಗುತ್ತದೆ’ ಎಂದು ಹೇಳಿದರು.

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿಗಳು ‘ಕೋವಿಶೀಲ್ಡ್‌’ ಲಸಿಕೆ ಅಭಿವೃದ್ಧಿಪಡಿಸಿದ್ದು, ಭಾರದತಲ್ಲಿ ಇದರ ಉತ್ಪಾದನೆ ಹಾಗೂ ಮಾರಾಟದ ಹೊಣೆಯನ್ನು ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ವಹಿಸಿಕೊಂಡಿದೆ.