ಇತ್ತೀಚೆಗಷ್ಟೇ ಭಾರತವು ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ಹೀಗಾಗಿ ನ್ಯೂಜಿಲೆಂಡ್‌ನಂತಹ ದೇಶದಿಂದ ಸೋವಿ ದರದ ಹಾಲು ಮತ್ತು ಹಾಲಿನ ಉತ್ಪನ್ನಗಳು ಭಾರತಕ್ಕೆ ದಾಳಿಯಿಡುವ ಆತಂಕದಿಂದ ಡೈರಿ ಉದ್ಯಮ ಪಾರಾಗಿತ್ತು. ಇದೀಗ ಡೈರಿ ಮತ್ತು ಪೌಲ್ಟ್ರಿ ಉದ್ದಿಮೆಗೆ ಮತ್ತೆ ಅಂತಹುದೇ ಆತಂಕ ಎದುರಾಗಿದೆ.

ಫೆಬ್ರವರಿ 24 ಮತ್ತು 25ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಭಾರತ ಅಮೆರಿಕದೊಂದಿಗಿನ ಸೀಮಿತ ವ್ಯಾಪಾರ ಒಪ್ಪಂದದ ಭಾಗವಾಗಿ ಇಲ್ಲಿನ ಪೌಲ್ಟ್ರಿ ಮತ್ತು ಡೈರಿ ಮಾರುಕಟ್ಟೆಗೆ ಅಮೆರಿಕದ ಭಾಗಶಃ ಪ್ರವೇಶಕ್ಕೆ ಒಪ್ಪಿಗೆ ನೀಡಬಹುದು ಎಂದು ಕಳೆದ ವಾರ ರಾಯ್ಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿತ್ತು. ಆದರೆ ಅಮೆರಿಕದ ವಾಣಿಜ್ಯ ಪ್ರತಿನಿಧಿಗಳಾಗಲೀ, ಭಾರತೀಯ ವಾಣಿಜ್ಯ ಸಚಿವಾಲಯವಾಗಲೀ ಈ ಬಗ್ಗೆ ಚಕಾರ ಎತ್ತಿರಲಿಲ್ಲ.

ಟ್ರಂಪ್‌ ಹಾದಿ ಸುಗಮಗೊಳಿಸಲು ನಾಯಿ, ನೀಲಿ ಜಿಂಕೆ 'ಮಾಯ': ಪಾನ್ ಅಂಗಡಿ ಸೀಲ್!

ರೈತರ ಹಿತಾಸಕ್ತಿಗೆ ಕುತ್ತು?

ಆದರೆ ಮರುದಿನ ಭಾರತದ ಅಧಿಕಾರಿಗಳು ಭಾರತವು ಅಮೆರಿಕಕ್ಕೆ ಇಂಥ ಆಫರ್‌ ನೀಡಿಲ್ಲ ಎಂದು ವರದಿಯನ್ನು ತಳ್ಳಿಹಾಕಿದರು. ಅದಕ್ಕೂ ಮೊದಲಿನ ವರದಿಗಳೂ ಸಹ ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್‌ ಲೈಟಿಂಗರ್‌ ತಮ್ಮ ಭಾರತ ಭೇಟಿಯನ್ನು ರದ್ದು ಮಾಡಿದ್ದಾರೆ, ಅಂದರೆ ಭಾರತ-ಅಮೆರಿಕದ ನಡುವೆ ಯಾವುದೇ ವ್ಯಾಪಾರ ಒಪ್ಪಂದ ಜರುಗುವ ಸಾಧ್ಯತೆ ಕಡಿಮೆ ಎಂದಿದ್ದವು.

ಸದ್ಯ ಭಾರತ-ಅಮೆರಿಕ ವ್ಯಾಪಾರವು ಮಾತುಕತೆಯ ಹಂತದಲ್ಲಿದೆ. ಅಮೆರಿಕವು ಭಾರತದೊಂದಿಗೆ ಗರಿಷ್ಠ ಪ್ರಮಾಣದ ವ್ಯಾಪಾರ ಒಪ್ಪಂದಕ್ಕೆ ಸಿದ್ಧವಾಗಿದೆ. ಆದರೆ ಅದು ದೇಶದ ರೈತರ ಮತ್ತು ಕೈಗಾರಿಕೆಗಳ ಹಿತಾಸಕ್ತಿ ರಕ್ಷಣೆಗೆ ವಿರುದ್ಧವಾಗಿದೆ.

ಬಹುಶಃ ಕಳೆದ ವಾರ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದ ಕೈಬಿಡಲು ಅಮೆರಿಕ ನಡೆಸಿದ ಕ್ರಮಗಳು ಸಂಕೀರ್ಣವಾಗಿದ್ದವು. ಇದು ಭಾರತೀಯ ಉತ್ಪನ್ನಗಳಿಗೆ ಆದ್ಯತೆಯನ್ನು ಕೊನೆಗೊಳಿಸುತ್ತಿತ್ತು.

ಇದಕ್ಕೂ ಭಾರತಕ್ಕೆ ಡೊನಾಲ್ಡ್‌ ಟ್ರಂಪ್‌ ಭೇಟಿ ನೀಡುತ್ತಿರುವುದಕ್ಕೂ ಸಂಬಂಧವಿಲ್ಲ. ಆದರೆ ಭಾರತ ಭೇಟಿ ವೇಳೆ ಹಲವಾರು ವ್ಯಾಪಾರ ಒಪ್ಪಂದಗಳಾಗುವ ಸಾಧ್ಯತೆ ಇದೆ. ಈ ವೇಳೆ ಸೀಮಿತ ವ್ಯಾಪಾರ ಒಪ್ಪಂದದಡಿ ಭಾರತದ ಮಾರುಕಟ್ಟೆಪ್ರವೇಶಿಸಲು ಅಮೆರಿಕ ಬೇಡಿಕೆ ಇಡಬಹುದು.

ಮೋದಿ- ಟ್ರಂಪ್ ಡೀಲ್; ಕುರಿ, ಕೋಳಿ, ಹಾಲು ವ್ಯಾಪಾರಿಗಳಲ್ಲಿ ಆತಂಕ ಶುರು

ಡೈರಿ, ಪೌಲ್ಟ್ರಿ ಉದ್ಯಮಕ್ಕೆ ಪ್ರವೇಶ?

ಭಾರತದ ಡೈರಿ ಮಾರುಕಟ್ಟೆಮತ್ತು ಪೌಲ್ಟ್ರಿ ಮಾರುಕಟ್ಟೆಯ ಪ್ರವೇಶದ ಹೊರತಾಗಿ, ಭಾರತದ ವೈದ್ಯಕೀಯ ಸಾಧನಗಳ ಅದರಲ್ಲೂ ಹಾರ್ಟ್‌ ಸ್ಟೆಂಟ್‌ಗಳ ಮೇಲಿನ ಬೆಲೆ ಇಳಿಕೆಗೆ ಮತ್ತು ಮೋಟರ್‌ ಸೈಕಲ್‌, ವಾಲ್‌ನಟ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತಿತರ ಉತ್ಪನ್ನಗಳ ಮೇಲಿನ ಕಸ್ಟಮ್‌ ಸುಂಕ ಇಳಿಕೆಗೆ ಅಮೆರಿಕ ಎದುರು ನೋಡುತ್ತಿದೆ. ಫೆಬ್ರವರಿ 1 ರಂದು ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಈ ಎಲ್ಲಾ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚು ಮಾಡಲಾಗಿದೆ.

ಈ ಸುಂಕ ಹೆಚ್ಚಳ ವಾಷಿಂಗ್ಟನ್‌ ಅಧಿಕಾರಿಗಳಿಗೆ ವ್ಯಾಪಾರ ಒಪ್ಪಂದಕ್ಕೆ ಅಡ್ಡಿಯುಂಟುಮಾಡಿದೆ. ರಾಯ್ಟರ್ಸ್‌ ವರದಿ ಪ್ರಕಾರ ಭಾರತ ಚಿಕನ್‌ ಲೆಗ್‌ ಮೇಲಿನ ಆಮದು ಸುಂಕವನ್ನು 25% ಕಡಿಮೆ ಮಾಡುವ ಆಫರ್‌ ನೀಡಿದೆ. ಆದರೆ ಅಮೆರಿಕ ಇನ್ನೂ 10% ಇಳಿಕೆಗೆ ಬೇಡಿಕೆ ಇಡುತ್ತಿದೆ. ಕೋಳಿ ಆಮದು ಒಪ್ಪಂದವು ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ನಿಯಮಾವಳಿಗಳಿಗೆ ಅನುಸಾರವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ಭಾರತವು ಸುದೀರ್ಘ ಕಾಲ ಪ್ರವೇಶ ನೀಡದ ಚಿಕನ್‌ ಲೆಗ್‌ ಮಾರುಕಟ್ಟೆಗೆ ಪ್ರವೇಶಿಸಲು ಅಮೆರಿಕವು ವಿಶ್ವ ವಾಣಿಜ್ಯ ಸಂಘಟನೆಯ ವ್ಯಾಜ್ಯ ಮಂಡಳಿಯ ಕದ ತಟ್ಟಿತ್ತು. ಆದಾಗ್ಯೂ, ಸುಂಕವನ್ನು ಶೇ.100ರಿಂದ 30ಕ್ಕೆ ಇಳಿಸುವ ಮೂಲಕ ಅಮೆರಿಕದ ಮನವಿಗೆ ಪೂರ್ಣ ಪ್ರಮಾಣದಲ್ಲಿ ಮಣಿಯದಿರಲು ಭಾರತ ಹವಣಿಸುತ್ತಿದೆ.

ಪೌಲ್ಟ್ರಿ  ಉದ್ಯಮಕ್ಕೆ 24-40% ನಷ್ಟ?

ಭಾರತ ಒಂದು ವೇಳೆ ಅಮೆರಿಕದೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿದರೆ ಇಲ್ಲಿನ ಪೌಲ್ಟಿ್ರ ಉದ್ಯಮಕ್ಕೆ ಅಪಾರ ನಷ್ಟವಾಗುತ್ತದೆ ಎಂದು ಭಾರತದ ಪೌಲ್ಟಿ್ರ ಕೈಗಾರಿಕೆಗಳು ಆತಂಕ ವ್ಯಕ್ತಪಡಿಸುತ್ತಿವೆ. ಇದರಿಂದ ದೇಶೀಯ ಜೋಳ ಮತ್ತು ಸೋಯಾಬೀನ್‌ ಕ್ಷೇತ್ರದ ಮೇಲೂ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಅಮೆರಿಕದೊಂದಿಗೆ ಈ ಒಪ್ಪಂದ ನಡೆದರೆ ಉದ್ಯಮವು 25-40% ಲಾಭಾಂಶ ಕಳೆದುಕೊಳ್ಳಬೇಕಾಗುತ್ತದೆ ಎಂದು ಪೌಲ್ಟ್ರಿ ಕ್ಷೇತ್ರ ಆತಂಕ ವ್ಯಕ್ತಪಡಿಸಿದೆ.

ಏಕೆಂದರೆ ಒಪ್ಪಂದದ ಪ್ರಕಾರವಾಗಿ ಅಮೆರಿಕ, ಬ್ರೆಜಿಲ್‌ ಕಡಿಮೆ ಬೆಲೆಗೆ ಭಾರತಕ್ಕೆ ಚಿಕನ್‌ ಲೆಗ್‌ ರಫ್ತು ಮಾಡಲು ಆರಂಭಿಸುತ್ತವೆ. ಇನ್ನೊಂದೆಡೆ ತನ್ನ ದೇಶದ ಗ್ರಾಹಕರು ಚಿಕನ್‌ ಬ್ರೆಸ್ಟ್‌ಗೆ ಆದ್ಯತೆ ನೀಡುತ್ತಿರುವುದರಿಂದ ಅಮೆರಿಕ ಭಾರತಕ್ಕೆ ಚಿಕನ್‌ ಲೆಗ್‌ ರಫ್ತು ಮಾಡುವುದನ್ನು ಹೆಚ್ಚಿಸುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಉತ್ಪನ್ನವನ್ನು ಸಣ್ಣ ಪ್ರಮಾಣದಲ್ಲಿ ಮಾತ್ರ ಸೇವಿಸುವುದರಿಂದ ಆಮದು ಈ ವಲಯದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ.

3 ಗಂಟೆ ಇರಲಿರುವ ಟ್ರಂಪ್‌ಗಾಗಿ 100 ಕೋಟಿ ರೂ. ಖರ್ಚು ಮಾಡಿದ ಸರ್ಕಾರ!

ಡೈರಿ ಉತ್ಪನ್ನ ಆಮದಿಂದ ಏನಾಗುತ್ತೆ?

ಇತ್ತ ಭಾರತಕ್ಕೆ ಅಮೆರಿಕದ ಡೈರಿ ಉತ್ಪನ್ನಗಳ ಪ್ರವೇಶಕ್ಕೆ ಅವಕಾಶ ನೀಡುವುದರಿಂದ ಧಾರ್ಮಿಕ ಅಂಶ ಆಧಾರಿತ ಒಂದು ಕ್ಲಿಷ್ಟ ಸಮಸ್ಯೆ ಎದುರಾಗುತ್ತದೆ. ಅಮೆರಿಕದಲ್ಲಿ ಜಾನುವಾರುಗಳಿಗೆ ಅಂಗಾಂಗಳು, ರಕ್ತ, ಮಾಂಸವನ್ನು ಆಹಾರವಾಗಿ ನೀಡಲಾಗುತ್ತದೆ. ರಫ್ತು ಮಾಡುವ ಡೈರಿ ಉತ್ಪನ್ನಗಳನ್ನು ಅಂತಹ ಪ್ರಾಣಿಗಳಿಂದ ಪಡೆಯಲಾಗಿಲ್ಲ ಎಂದು ವಾಷಿಂಗ್ಟನ್‌ ಪ್ರಮಾಣೀಕರಿಸಿದರೂ, ಡೈರಿ ಉತ್ಪನ್ನಗಳ ಮೇಲೆ 5% ಆಮದು ಸುಂಕ ವಿಧಿಸುವುದಾಗಿ ಭಾರತ ಅಮೆರಿಕಕ್ಕೆ ಸ್ಪಷ್ಟಪಡಿಸಿದೆ.

ಕೇವಲ ಧಾರ್ಮಿಕ ಭಾವನೆಗೆ ಧಕ್ಕೆಯಾಗುವುದು ಮಾತ್ರವಲ್ಲದೆ ಇಂಥ ಆಹಾರ ಸೇವಿಸಿದ ಹಸುಗಳಿಗೆ ಹುಚ್ಚು ಹಿಡಿಯಬಹುದು. ಅಲ್ಲದೆ ಭಾರತದ ಸುಮಾರು 8 ಕೋಟಿ ಗ್ರಾಮೀಣ ಕುಟುಂಬಗಳು ಡೈರಿ ಉದ್ಯಮದ ಮೇಲೆ ಅವಲಂಬಿತವಾಗಿವೆ. ಹಾಗಾಗಿ ಅಮೆರಿಕದ ಡೈರಿ ಉತ್ಪನ್ನಗಳಿಗೆ ಆಹ್ವಾನ ನೀಡಿದರೆ ಅದು ಮತ್ತೊಂದು ವಿವಾದಕ್ಕೆ ಕಾರಣವಾಗಬಹುದು.

ಇತ್ತೀಚೆಗಷ್ಟೇ ಭಾರತವು ಪ್ರಾದೇಶಿಕ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ (ಆರ್‌ಸಿಇಪಿ) ಸಹಿ ಹಾಕಿ, ಸದಸ್ಯ ರಾಷ್ಟ್ರಗಳಾದ ನ್ಯೂಜಿಲೆಂಡ್‌ನಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಭಾರತದ ಡೈರಿ ಉದ್ಯಮ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿತ್ತು. ಆದರೆ ಕೊನೇ ಕ್ಷಣದಲ್ಲಿ ಭಾರತ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕದೆ ಹಿಂದೆ ಸರಿದಿತ್ತು.

ಕೃಷಿ ಉತ್ಪನ್ನಗಳ ಮೇಲೂ ಕಣ್ಣು

ಇಷ್ಟುಮಾತ್ರವಲ್ಲದೆ ಭಾರತದ ಕೃಷಿ ಉತ್ಪನ್ನಗಳಾದ ಬ್ಲ್ಯೂಬೆರಿ, ವಾಲ್‌ನಟ್ಸ್‌ ಮತ್ತು ಚೆರಿ ಮಾರುಕಟ್ಟೆಪ್ರವೇಶಕ್ಕೂ ಅಮೆರಿಕ ಎದುರು ನೋಡುತ್ತಿದೆ. ಆದರೆ ಭಾರತದ ಕೃಷಿ ಲಾಬಿಗಳು ಇದನ್ನು ವಿರೋಧಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹೋದರ ಸಂಘಟನೆಯಾದ ಸ್ವದೇಶಿ ಜಾಗರಣ್‌ ಮಂಚ್‌ ಕೂಡ ವಿರೋಧಿಸುತ್ತಿದೆ.

ಕಳೆದ ವರ್ಷವೇ ಈ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಿದ್ದು, ಈ ಕುರಿತ ಒಪ್ಪಂದ ನಡೆಯುತ್ತಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಹೇಳುತ್ತಿದ್ದಾರೆ. ಬಾದಾಮಿ, ವಾಲ್‌ನಟ್‌ ಮತ್ತು ಸೇಬು ಮತ್ತು ವೈನ್‌ ಮೇಲಿನ ಆಮದು ಸುಂಕವನ್ನು 100%ಗೆ ಹೆಚ್ಚಿಸಲಾಗಿದೆ.

ಭಾರತದ ಕಸ್ಟಮ್ಸ್‌ ಸುಂಕ ಹೆಚ್ಚಳವು ಅಮೆರಿಕವು ಉಕ್ಕಿನ ಮೇಲೆ ಶೇ.25ರಷ್ಟುಹೆಚ್ಚುವರಿ ಸುಂಕ ವಿಧಿಸಿದ್ದರ ಮತ್ತು್ತ ಅಲ್ಯೂಮಿನಿಯಂ ಮೇಲೆ ಶೇ.10ರಷ್ಟುಹೆಚ್ಚುವರಿ ಸುಂಕ ವಿಧಿಸಿದ್ದರ ನಿರ್ಧಾರಕ್ಕೆ ಪ್ರತೀಕಾರವಾಗಿ ಕಂಡುಬಂದಿದೆ. ಜೊತೆಗೆ ಅಮೆರಿಕ ತನ್ನ ರಫ್ತುಗಳ ಮೇಲೆ ಸಾಮಾನ್ಯೀಕೃತ ಆದ್ಯತಾ ವ್ಯವಸ್ಥೆಯನ್ನು (ಜಿಎಸ್‌ಪಿ) ಹಿಂತೆಗೆದುಕೊಂಡಿದ್ದರಿಂದ ಭಾರತಕ್ಕೂ ನಷ್ಟವಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಭಾರತದೊಂದಿಗೆ ತನ್ನ ವ್ಯಾಪಾರ ಕೊರತೆ 1700 ಕೋಟಿ ಡಾಲರ್‌ ಆಗಿದ್ದರಿಂದ ಭಾರತವು ತನ್ನ ದೇಶದಿಂದ ಹೆಚ್ಚಿನ ಉತ್ಪನ್ನವನ್ನು ಖರೀದಿಸಬೇಕೆಂದು ಅಮೆರಿಕ ಬಯಸುತ್ತಿದೆ. ಭಾರತವು ತೈಲ, ಅನಿಲ ಮತ್ತು ರಕ್ಷಣಾ ಉತ್ಪನ್ನಗಳನ್ನು ಖರೀದಿಸುವುದರಿಂದ ಅಮೆರಿಕದ ವ್ಯಾಪಾರ ಕೊರತೆ ಕುಸಿಯುತ್ತಿದೆ.

ಬೆಲೆಗೆ ಮಿತಿ ನಿಗದಿ

ವೈದ್ಯಕೀಯ ಉತ್ಪನ್ನಗಳ ಮೇಲಿನ ದರದ ವಿಷಯದಲ್ಲಿ ಭಾರತವು ಬೆಲೆ ನಿಗದಿಯ ಮಿತಿಯನ್ನು ಸಡಿಲಿಸುವುದಿಲ್ಲ. ಆದರೆ ಆಮದುದಾರರ ಭಯವನ್ನು ಹೋಗಲಾಡಿಸಲು ವ್ಯಾಪಾರವನ್ನು ತರ್ಕಬದ್ಧಗೊಳಿಸುತ್ತೇವೆ ಎಂದು ಭಾರತ ಸ್ಪಷ್ಟಪಡಿಸಿದೆ. ಈ ಕುರಿತು ಕೇಂದ್ರವೂ ಎರಡು ಶಿಫಾರಸುಗಳನ್ನು ಪರಿಶೀಲಿಸುತ್ತಿದೆ. ವೈದ್ಯಕೀಯ ಉತ್ಪನ್ನಗಳ ಮೇಲೆ 65% ಟ್ರೇಡ್‌ ಮಾರ್ಜಿನ್‌ ನಿಗದಿಗೆ ನೀತಿ ಆಯೋಗ ಶಿಫಾರಸು ಮಾಡಿತ್ತು.

ಆದರೆ ಫಾರ್ಮಾಸ್ಯುಟಿಕಲ್‌ ಇಲಾಖೆಯು 50% ಮಾರ್ಜಿನ್‌ ನಿಗದಿ ಮಾಡಲು ಸಲಹೆ ನೀಡಿತ್ತು. ಹಾಗಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಸಾರ್ವಜನಿಕರಿಗೆ ಅವುಗಳ ಲಭ್ಯತೆಯನ್ನು ಹೆಚ್ಚಿಸಲು ಮೆಡಿಕಲ್‌ ಉತ್ಪನ್ನಗಳ ಮೇಲೆ ದರದ ಮಿತಿ ಪರಿಚಯಿಸಿತು.

ರಕ್ಷಣಾ, ತೈಲ ಕ್ಷೇತ್ರದ ಒಪ್ಪಂದ

ಸರ್ಕಾರದ ಆದ್ಯತೆಗಳು ಕೃಷಿ ಕ್ಷೇತ್ರ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುತ್ತಿವೆ ಎಂದು ಅಧಿಕಾರಿಗಳಿಗೆ ಮನವರಿಕೆಯಾಗಿದೆ. ಮತ್ತೊಂದೆಡೆ, ವಾಷಿಂಗ್ಟನ್‌ ತನ್ನ ಕೈಗಾರಿಕೆಗಳಿಗೆ ಭಾರತದಂತಹ ಪ್ರಮುಖ ಮಾರುಕಟ್ಟೆಗಳಿಗೆ ಪ್ರವೇಶ ಪಡೆಯಲು ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಹೀಗೆ ಪ್ರತಿ ದೇಶವೂ ತಮ್ಮ ದೃಷ್ಟಿಕೋನ ಸರಿಯಾಗಿದೆ ಎಂದು ಭಾವಿಸುವ ಇಂಥ ಸನ್ನಿವೇಶದಲ್ಲಿ, ಕೆಲವು ಸಭೆಗಳು ಮಹತ್ವದ ಸ್ಥಾನ ಪಡೆಯುತ್ತವೆ.

ಅಮೆರಿಕಕ್ಕೆ ತನ್ನ ಉದ್ಯಮಿಗಳ ಹಿತಾಸಕ್ತಿ ಮುಖ್ಯ. ಭಾರತದೊಂದಿಗೆ ಅಲ್ಪಾವಧಿ ವ್ಯಾಪಾರ ಒಪ್ಪಂದವು ಅಸಂಭವವಾಗಿದ್ದರೂ, ಭಾರತ ಮತ್ತು ಅಮೆರಿಕ ರಕ್ಷಣಾ, ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿ ಒಂದಿಷ್ಟುಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.

ಕೃಪೆ: ಸ್ವರಾಜ್ಯಮ್ಯಾಗ್‌