ನವದೆಹಲಿ[ಡಿ.11]: ನೆರೆ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ, ಪೌರತ್ವ ತಿದ್ದು ಪಡಿ ಕಾಯ್ದೆ ಲೋಕಸಭೆಯಲ್ಲಿ ಅಂಗೀಕಾರವಾಗುತ್ತಿದ್ದಂತೆ ಪ್ರತಿಭಟನೆಗಳು ತೀವ್ರವಾಗಿದೆ.

ದೆಹಲಿ, ಪಶ್ಚಿಮ ಬಂಗಾಳ ಸಹಿತ ಈಶಾನ್ಯ ರಾಜ್ಯಗಳಲ್ಲಿ ಈ ಕಾಯ್ದೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಜನ ಬೀದಿಗೆ ಇಳಿದಿದ್ದಾರೆ. ಅಸ್ಸಾಂನಲ್ಲಿ ಎಡ ವಿದ್ಯಾರ್ಥಿ ಸಂಘಟನೆಗಳು ರಾಜ್ಯ ಬಂದ್‌ಗೆ ಮಾಡಿವೆ. ಬಸ್‌ ಮೇಲೆ ಕಲ್ಲು ತೂರಾಟ ನಡೆಸಿ, ರೈಲು ಸಂಚಾರ ಸ್ಥಗಿತಗೊಳಿಸಿದ್ದಾರೆ. ಅರುಣಾಚಲ ಬಂದ್‌ ಕೂಡ ಯಶಸ್ವಿಯಾಗಿದ್ದು, ಪ್ರತಿಭಟನಾಕಾರರು ಟೈರ್‌ ಸುಟ್ಟು, ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತ್ರಿಪುರಾದಲ್ಲೂ ಕಾಯ್ದೆ ವಿರುದ್ದ ಪ್ರತಿಭಟನೆ ತೀವ್ರವಾಗಿದ್ದು, ಮಂಗಳವಾರ ಮಧ್ಯಾಹ್ನ 2 ಗಂಟೆಯಿಂದ ಮುಂದಿನ ಎರಡು ದಿನಗಳ ಕಾಲ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ನಾಗಾಲ್ಯಾಂಡ್‌ ಹಾಗೂ ಮೇಘಾಲಯದಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಪಶ್ಚಿಮ ಬಂಗಾಳದ ವಿವಿದೆಡೆ ಪ್ರತಿಭಟನೆ ನಡೆದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿ ಹಾಗೂ ಸಾಮಾಜಿಕ ಸಂಘಟನೆಗಳು ಕಾಯ್ದೆಯ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತ ಪಡಿಸಿವೆ.