ಅಯೋಧ್ಯೆಯ ಭವ್ಯವಾದ ರಾಮ ಮಂದಿರದ ನಿರ್ಮಾಣವು ಡಿಸೆಂಬರ್ 2023 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರ ಜನವರಿ 2024 ರಲ್ಲಿ ಮಕರ ಸಂಕ್ರಾಂತಿ ಹಬ್ಬದ ವೇಳೆಗೆ ಶ್ರೀರಾಮನು ಗರ್ಭಗುಡಿಯಲ್ಲಿ ಆಸೀನರಾಗಬಹುದು ಎಂದು ಹೇಳಲಾಗಿದೆ. 

ಅಯೋಧ್ಯೆಯಲ್ಲಿ (Ayodhya) ಸುಪ್ರೀಂಕೋರ್ಟ್‌ ಆದೇಶದ ಅನುಸಾರ ಭವ್ಯವಾದ ರಾಮ ಮಂದಿರ (Ram Mandir) ನಿರ್ಮಾಣವಾಗುತ್ತಿದೆ. ಈ ರಾಮಮಂದಿರ ನಿರ್ಮಾಣಕ್ಕೆ ಸುಮಾರು 1,800 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ಪರಿಷ್ಕೃತ ಅಂದಾಜು ಮೊತ್ತ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಸಭೆಯನ್ನು ಭಾನುವಾರ ಕರೆಯಲಾಗಿತ್ತು. ಈ ಸಭೆಯ ಬಳಿಕ ಚಂಪತ್ ರಾಯ್‌ ಈ ಮಾಹಿತಿ ನೀಡಿದ್ದಾರೆ. "ಹಲವಾರು ಪರಿಷ್ಕರಣೆಗಳ ನಂತರ, ನಾವು ಈ ಅಂದಾಜನ್ನು ತಲುಪಿದ್ದೇವೆ. ಇದು ಕೂಡ ಹೆಚ್ಚಾಗಬಹುದು" ಎಂದೂ ಚಂಪತ್ ರಾಯ್‌ ನಿರ್ಮಾಣ ವೆಚ್ಚದ ಬಗ್ಗೆ ಹೇಳಿದರು. ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ನೇತೃತ್ವದಲ್ಲಿ ನಿನ್ನೆ ಸಭೆ (Meeting) ನಡೆದಿದೆ ಎಂದು ತಿಳಿದುಬಂದಿದೆ.

ಅಲ್ಲದೆ, ಸಭೆಯಲ್ಲಿ ತನ್ನ ನಿಯಮಗಳು ಮತ್ತು ನಿಬಂಧನೆಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಂತಿಮಗೊಳಿಸಿದೆ ಎಂದೂ ಚಂಪತ್ ರಾಯ್‌ ತಿಳಿಸಿದ್ದಾರೆ. "ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಯಮಗಳು ಮತ್ತು ನಿಬಂಧನೆಗಳನ್ನು ಅಂತಿಮಗೊಳಿಸಲಾಗಿದೆ. ನಾವು ಕಳೆದ ಹಲವಾರು ತಿಂಗಳುಗಳಿಂದ ಈ ನಿಟ್ಟಿನಲ್ಲಿ ಕಾರ್ಯಗತವಾಗಿದ್ದೆವು" ಎಂದು ಚಂಪತ್ ರಾಯ್‌ ಹೇಳಿದರು. ಟ್ರಸ್ಟ್‌ನ 15 ಸದಸ್ಯರ ಪೈಕಿ 14 ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ರಾಮಾಯಣ ಕಾಲದ ಹಲವಾರು ಇತರ ದೇವತೆಗಳ ವಿಗ್ರಹಗಳನ್ನು ಸಹ ರಾಮಮಂದಿರದಲ್ಲಿ ಇರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ರಾಮ ಮಂದಿರ ನಿರ್ಮಾಣಕ್ಕೆ ಯಶ್ ದೇಣಿಗೆ ? 50 ಕೋಟಿ ದೇಣಿಗೆ ಸತ್ಯವೇನು ಗೊತ್ತಾ ?

ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್, ಖಜಾಂಚಿ ಗೋವಿಂದ್ ದೇವ್ ಗಿರಿ, ಸದಸ್ಯರಾದ ಉಡುಪಿ ಪೀಠಾಧೀಶ್ವರ ವಿಶ್ವತೀರ್ಥ ಪ್ರಸನ್ನಾಚಾರ್ಯ, ಡಾ.ಅನಿಲ್ ಮಿಶ್ರಾ, ಮಹಂತ್ ದಿನೇಂದ್ರ ದಾಸ್, ಕಾಮೇಶ್ವರ ಚೌಪಾಲ್, ಪದನಿಮಿತ್ತ ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಅಯೋಧ್ಯೆಯಲ್ಲಿ ಭಾನುವಾರ ನಡೆದ ಈ ಸಭೆಯಲ್ಲಿ ಉಪಸ್ಥಿತರಿದ್ದರು. ಹಾಗೂ, ಕೇಶವ್ ಪರಾಶರನ್, ಯುಗಪುರುಷ ಪರಮಾನಂದ್, ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಮತ್ತು ಪದನಿಮಿತ್ತ ಸದಸ್ಯ ಹಾಗೂ ಗೃಹ ಸಚಿವಾಲಯದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ವಾಸ್ತವಿಕವಾಗಿ ಸಭೆಯಲ್ಲಿ ಭಾಗಿಯಾಗಿದ್ದರು..

ಡಿಸೆಂಬರ್ 2023 ರ ವೇಳೆಗೆ ರಾಮ ಮಂದಿರ ಪೂರ್ಣ
ಅಯೋಧ್ಯೆಯ ಭವ್ಯವಾದ ರಾಮ ಮಂದಿರದ ನಿರ್ಮಾಣವು ಡಿಸೆಂಬರ್ 2023 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಚಂಪತ್‌ ರಾಯ್‌ ಹೇಳಿದರು. ಅಲ್ಲದೆ, ಜನವರಿ 2024 ರಲ್ಲಿ ಮಕರ ಸಂಕ್ರಾಂತಿ ಹಬ್ಬದ ವೇಳೆಗೆ ಶ್ರೀರಾಮನು ಗರ್ಭಗುಡಿಯಲ್ಲಿ ಆಸೀನರಾಗುವ ನಿರೀಕ್ಷೆಯಿದೆ. ಈ ಮಧ್ಯೆ, ರಾಮ ಮಂದಿರದ ಸಭೆಯ ಮೊದಲು, ಟ್ರಸ್ಟ್‌ನ ಅಧಿಕಾರಿಗಳು ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಸ್ಥಳ ಪರಿಶೀಲನೆ ನಡೆಸಿದರು ಮತ್ತು ಇದುವರೆಗಿನ ನಿರ್ಮಾಣ ಪ್ರಗತಿಯನ್ನು ಪರಿಶೀಲಿಸಿದರು. ಕಟ್ಟಡ ನಿರ್ಮಾಣ ಸಮಿತಿಯ ಸಭೆಯು ಪ್ರತಿ ತಿಂಗಳು ನಡೆಯುತ್ತದೆ. ರಾಮಮಂದಿರದ 'ಗರ್ಭ ಗೃಹ' (Garbha Griha) ಅಥವಾ ದೇವಾಲಯದ ಗರ್ಭಗುಡಿಯ ನಿರ್ಮಾಣಕ್ಕೆ ಈ ವರ್ಷದ ಜೂನ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಡಿಪಾಯ ಹಾಕಿದ್ದರು.

ಅಯೋಧ್ಯೆ ರಾಮಮಂದಿರ ಗರ್ಭಗುಡಿಯ ಮೊದಲ ಚಿತ್ರ, ಇದೇ ಸ್ಥಳದಲ್ಲಿ ಇರಲಿದ್ದಾನೆ ರಾಮಲಲ್ಲಾ!