ನವದೆಹಲಿ[ಮಾ.19]: ವಿಶ್ವದಲ್ಲಿ ಅಟ್ಟಹಾಸ ಮೂಡಿಸಿರುವ ಕೊರೋನಾ ವೈರಸ್ ಸದ್ಯ ದೇಶದಲ್ಲೂ ತನ್ನ ರುದ್ರ ತಾಂಡವ ಮುಂದುವರೆಸಿದೆ. ದೇಸದಲ್ಲಿ ಒಟ್ಟು 3 ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 150 ದಾಟಿದೆ. ಸರ್ಕಾರ ಕೂಡಾ ಸೋಂಕು ತಡೆಗಟ್ಟುವಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸುತ್ತಿದೆ. ಹೀಗಿರುವಾಗ ಕೇಂದ್ರ ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಕೊರೋನಾವನ್ನು ನಿಯಂತ್ರಿಸಲು ಮಧ್ಯಾಹ್ನದ ಉರಿ ಬಿಸಿಲಿಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ.

ಹೌದು ಸಂಸತ್ತು ಆವರಣದಲ್ಲಿ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ 'ಮಧ್ಯಾಹ್ನ 11 ಗಂಟೆಯಿಂದ 2 ಗಂಟೆವರೆಗೆ ಹೆಚ್ಚು ಬಿಸಿಲಿರುತ್ತದೆ, ಸೂರ್ಯನ ಕಿರಣಗಳು ಹೆಚ್ಚು ಪ್ರಖರವಾಗಿರುತ್ತವೆ. ಹೀಗಿರುವಾಗ ಸುಮಾರು 15 ನಿಮಿಷ ಬಿಸಿಲು ಕಾಯಿಸಿಕೊಂಡರೆ ಬಹಳ ಲಾಭದಾಯಕ. ಅದರಿಂದ ವಿಟಮಿನ್ ಡಿ ನಮ್ಮ ದೇಹ ಸೇರುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ಎಲ್ಲಾ ಪ್ರಕಾರದ ವೈರಸ್ ನಾಶಗೊಳ್ಳುತ್ತವೆ. ಹೀಗಗಿ ಬಿಸಿಲು ಸೇವಿಸಬೇಕು' ಎಂದಿದ್ದಾರೆ.

ಸದ್ಯ ಕೇಂದ್ರ ಸಚಿವ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಒಂದೆಡೆ ವೈದ್ಯರು ಬಿಸಿಲಿನ ತಾಪಕ್ಕೆ ಕೊರೋನಾ ವೈರಸ್ ನಾಶವಾಗುವುದಿಲ್ಲ ಎಂಬ ಪಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕೇಂದ್ರ ಸಚಿವರು ಇಂತಹ ಹೇಳಿಕೆ ನೀಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಮಾರ್ಚ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ