Asianet Suvarna News Asianet Suvarna News

ಅವಿಭಜಿತ ದ.ಕ. ಮೊದಲ ಕೇಂದ್ರ ಸಚಿವೆ ಕರಂದ್ಲಾಜೆ!

* ಸಂಘಟಕಿ, ಸಚಿವೆಯಾಗಿ ಗಮನ ಸೆಳೆದಿದ್ದ ಶೋಭಾ

* ಅವಿಭಜಿತ ದ.ಕ. ಮೊದಲ ಕೇಂದ್ರ ಸಚಿವೆ ಕರಂದ್ಲಾಜೆ

* ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 2ನೇ ಬಾರಿ ಸಂಸದೆಯಾಗಿ ಲೋಕಸಭೆ ಪ್ರವೇಶ

Shobha Karandlaje First Union Minister From Undivided Dakshina Kannada pod
Author
Bangalore, First Published Jul 8, 2021, 10:09 AM IST

ಉಡುಪಿ(ಜು.08): ಕೆಲದಿನಗಳ ಹಿಂದೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೇಂದ್ರ ಸರ್ಕಾರದ ಸಚಿವ ಸ್ಥಾನಕ್ಕೆ ತಾನು ಆಕಾಂಕ್ಷಿಯಲ್ಲ, ಸಚಿವರಾಗುವುದಕ್ಕೆ ರಾಜ್ಯದಲ್ಲಿ ಬೇರೆ ಹಿರಿಯ ಸಂಸದರಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಆದರೆ, ಈಗ ಬೇರೆ ಹಿರಿಯ ಸಂಸದರಿದ್ದರೂ ಶೋಭಾ ಅವರಿಗೆ ಸಚಿವೆಯಾಗುವ ಅದೃಷ್ಟಒಲಿದು ಬಂದಿದೆ. ಮೊದಲ ಬಾರಿ ಕೇಂದ್ರ ಸಚಿವರಾಗುವ ಅವಕಾಶ ಪಡೆದುಕೊಂಡಿದ್ದಾರೆ. ತನ್ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಕೇಂದ್ರ ಸಚಿವೆ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

ಶೋಭಾ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 2ನೇ ಬಾರಿ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ಇದಕ್ಕೂ ಮೊದಲು ಪಕ್ಷ ಸಂಘಟನೆಯಲ್ಲಿ, ರಾಜ್ಯದಲ್ಲಿ ಶಾಸಕಿಯಾಗಿ, ಸಚಿವೆಯಾಗಿ ಪಕ್ಷದ ಕೇಂದ್ರ ನಾಯಕರ ಗಮನ ಸೆಳೆದವರು ಶೋಭಾ. 2004ರಲ್ಲಿ ವಿಧಾನ ಪರಿಷತ್‌ ಸದಸ್ಯೆಯಾಗಿ ವಿಧಾನಸಭೆ ಪ್ರವೇಶಿಸಿದ ಅವರು, 2008ರಲ್ಲಿ ಯಶವಂತಪುರದಿಂದ ವಿಧಾನಸಭೆಗೆ ಆಯ್ಕೆಯಾದರು. ಮಾತ್ರವಲ್ಲ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವೆಯೂ ಆದರು. 2009ರಲ್ಲಿ ರಾಜ್ಯ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ಪುನಃ ಜಗದೀಶ್‌ ಶೆಟ್ಟರ್‌ ಸರ್ಕಾರದಲ್ಲಿ ಇಂಧನ ಸಚಿವೆಯಾದರು.

2010ರಲ್ಲಿ ಯಡಿಯೂರಪ್ಪ ಜೊತೆ ಕೆಜೆಪಿ ಸೇರಿ, ರಾಜಾಜಿನಗರದಿಂದ ವಿಧಾನಸಭೆಗೆ ಸ್ಪರ್ಧಿಸಿ, 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. 2014ರಲ್ಲಿ ಮತ್ತೆ ಯಡಿಯೂರಪ್ಪ ಜೊತೆ ಬಿಜೆಪಿಗೆ ಬಂದ ಅವರು 2014ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. 2019ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದಾರೆ.

ಸಂಘದ ಪೂರ್ಣಕಾಲಿಕ ಸದಸ್ಯೆ:

1966ರ ಅಕ್ಟೋಬರ್‌ 23ರಂದು ಪುತ್ತೂರಿನ ಚಾರ್ವಾಕ ಗ್ರಾಮದಲ್ಲಿ ಜನಿಸಿದ ಶೋಭಾ, ಎಳವೆಯಲ್ಲೇ ರಾಷ್ಟ್ರೀಯ ಸ್ವಯಂ ಸೇವಾ ಸಂಘದತ್ತ ಆಕರ್ಷಿತರಾದವರು, ಸಂಘದಲ್ಲಿರುವ ಕೆಲವೇ ಪೂರ್ಣಕಾಲಿಕ ಸದಸ್ಯರಲ್ಲೊಬ್ಬರು. ಮಂಗಳೂರಿನ ರೋಶನಿ ನಿಲಯದಲ್ಲಿ ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪಡೆದಿರುವ ಅವರು, ಮಣಿಪಾಲದಲ್ಲಿ ಕೆಲಕಾಲ ಉದ್ಯೋಗದಲ್ಲಿದ್ದರು. ಮೈಸೂರು ಮುಕ್ತ ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕಿ, ಪ್ರಸ್ತುತ ರಾಜ್ಯ ಉಪಾಧ್ಯಕ್ಷೆಯೂ ಆಗಿದ್ದ ಅವರು ಸಂಘದ ಸೂಚನೆಯಂತೆ ರಾಜಕೀಯಕ್ಕಿಳಿದು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ನಂತರ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.

ಸಂಸತ್ತಿನಲ್ಲಿ ಶೋಭಾ ಅನುಭವ

2014ರಲ್ಲಿ ಮಹಿಳಾ ಸಬಲೀಕರಣ ಸಮಿತಿ, ಕೇಂದ್ರ ರಕ್ಷಣಾ ಸ್ಥಾಯಿ ಸಮಿತಿ, ಕೃಷಿ ಸಚಿವಾಲಯದ ಸಲಹಾ ಸಮಿತಿ, 2015ರಲ್ಲಿ ಪಾರದರ್ಶಕ ಭೂಸ್ವಾಧೀನ ಮತ್ತು ಪರಿಹಾರ, ಪುನರ್ವಸತಿ ಕಾಯ್ದೆ ತಿದ್ದುಪಡಿಯ ಜಂಟಿ ಸಮಿತಿ, 2019ರಲ್ಲಿ ಇಂಧನ ಸ್ಥಾಯಿ ಸಮಿತಿ, ಮಹಿಳಾ ಸಬಲೀಕರಣ ಸಮಿತಿ, ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಸಲಹಾ ಸಮಿತಿಯ ಸದಸ್ಯೆಯಾಗಿಯೂ ಕೆಲಸ ಮಾಡಿದ ಅನುಭವ ಶೋಭಾ ಅವರಿಗಿದೆ.

ವಿವಾದಗಳು ಹೊಸತಲ್ಲ

ಹಿಂದುತ್ವ ಮತ್ತು ರಾಷ್ಟ್ರೀಯತೆ ಪರ ಗಟ್ಟಿಸ್ವರದಲ್ಲಿ ಮಾತನಾಡುವ ಶೋಭಾ ಅವರಿಗೆ ವಿವಾದಗಳು, ಪೊಲೀಸ್‌ ಪ್ರಕರಣಗಳೇನೂ ಹೊಸತಲ್ಲ. ಪ್ರಚೋದನಾಕಾರಿ ಹೇಳಿಕೆಗಳಿಗೆ ಅವರ ಮೇಲೆ 5 ಪ್ರಕರಣಗಳು ದಾಖಲಾಗಿವೆ. ಕೆಲವೇ ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ, ಚರ್ಚುಗಳಲ್ಲಿ ಕೋವಿಡ್‌ ಲಸಿಕೆ ವಿರುದ್ಧ ಪ್ರಚಾರ ಮಾಡಲಾಗುತ್ತಿದೆ ಎಂದವರು ನೀಡಿದ್ದ ಹೇಳಿಕೆಗೆ ದ.ಕ. ಜಿಲ್ಲೆಯ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios