ಕೊಚ್ಚಿ(ಡಿ.21): ಕೊರೋನಾ ವೈರಸ್‌ ಅಬ್ಬರವನ್ನು ಹತ್ತಿಕ್ಕಲು ಪ್ರಯತ್ನ ನಡೆಸುತ್ತಿರುವಾಗಲೇ ಕೇರಳದಲ್ಲಿ ಬ್ಯಾಕ್ಟಿರಿಯಾ ಸೋಂಕು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಶಿಗೆಲ್ಲಾ ಎಂಬ ಸೋಂಕು ಇದಾಗಿದ್ದು, ಈಗಾಗಲೇ 11 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. 6 ಮಂದಿಯಲ್ಲಿ ಸೋಂಕು ಖಚಿತಪಟ್ಟಿದ್ದರೆ, 20 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ಪೀಡಿತರ ಮೇಲೆ ಮಾರಕ ಬ್ಲ್ಯಾಕ್‌ ಫಂಗಸ್‌ ದಾಳಿಯಾಗುತ್ತಿದ್ದು, ಈಗಾಗಲೇ ದೇಶದಲ್ಲಿ 13 ಮಂದಿ ಆ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕೋಳಿಕೋಡ್‌ ಜಿಲ್ಲೆಯಲ್ಲಿ ಶಿಗೆಲ್ಲಾ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

ನೈಟ್ ಕರ್ಫ್ಯೂ ಜಾರಿ ಮಾಡಿದ್ರೆ ಕೊರೋನಾ ಬರಲ್ವಾ? ಇದರ ಉದ್ದೇಶವಾದ್ರೂ ಏನು?

ಶಿಗೆಲ್ಲಾ ಎಂಬ ಬ್ಯಾಕ್ಟಿರಿಯಾದಿಂದ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಅತಿಸಾರ ಭೇದಿ, ಜ್ವರ ಹಾಗೂ ಹೊಟ್ಟೆನೋವು ಇದರ ಲಕ್ಷಣಗಳು. ಕೆಲವರಲ್ಲಿ ಸೋಂಕಿನ ಲಕ್ಷಣವೇ ಕಂಡುಬರುವುದಿಲ್ಲ. ಮೂರಕ್ಕಿಂತ ಹೆಚ್ಚು ದಿನ ಭೇದಿ ಹಾಗೂ ಇನ್ನಿತರೆ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಕಾಣಬೇಕು. ಕಲುಷಿತ ಆಹಾರ ಹಾಗೂ ನೀರಿನಿಂದ ಈ ಸೋಂಕು ಹಬ್ಬುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಸಾಮಾನ್ಯ ಭೇದಿಗಿಂತ ಇದು ಭಿನ್ನವಾಗಿದ್ದು, ಬಹುಬೇಗನೆ ಸೋಂಕಿತರು ಅಸ್ವಸ್ಥರಾಗಿ ಅವರ ಪರಿಸ್ಥಿತಿ ವಿಷಮಿಸುತ್ತದೆ. ಈಗಾಗಲೇ 6 ಮಂದಿಯ ಮಲ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ದೃಢಪಟ್ಟಿದೆ ಎಂದು ಕೋಳಿಕೋಡ್‌ ಜಿಲ್ಲಾ ಆರೋಗ್ಯಾಧಿಕಾರಿ ಡಾ| ವಿ. ಜಯಶ್ರೀ ಅವರು ತಿಳಿಸಿದ್ದಾರೆ.

ಸೋಂಕಿತರಿಗೆ ಸಾಮಾನ್ಯವಾಗಿ ಆ್ಯಂಟಿಬಯೋಟಿಕ್ಸ್‌ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯೂ ಸೋಂಕು ಹಬ್ಬಲು ಕಾರಣನಾಗಬಲ್ಲ. ಸಣ್ಣ ಪ್ರಮಾಣದ ಬ್ಯಾಕ್ಟಿರಿಯಾಗಳಿಂದಲೂ ಈ ಸೋಂಕು ಹಬ್ಬುತ್ತದೆ. ಮಲ ಪರೀಕ್ಷೆ ಮೂಲಕ ಮಾತ್ರವೇ ಈ ಸೋಂಕಿನ ಪರೀಕ್ಷೆ ನಡೆಸಲಾಗುತ್ತದೆ. ನೈರ್ಮಲ್ಯ ಕಾಪಾಡಿಕೊಳ್ಳುವುದು, ಕೈಗಳನ್ನು ತೊಳೆಯುವುದರಿಂದ ಈ ಸೋಂಕಿನಿಂದ ದೂರ ಉಳಿಯಬಹುದು. ಏಕೆಂದರೆ ಸೋಂಕಿತ ಸ್ಥಳವನ್ನು ಮುಟ್ಟಿಅದೇ ಕೈಯನ್ನು ಬಾಯಿಗೆ ತಾಕಿಸಿದರೆ ಸೋಂಕು ಹಬ್ಬುತ್ತದೆ. ಸೋಂಕಿತ ವ್ಯಕ್ತಿ ಸಿದ್ಧಪಡಿಸಿದ ಆಹಾರ ಸೇವನೆಯಿಂದಲೂ ಸೋಂಕು ಬರಬಹುದು.

ಎಲ್ಲ ವಯೋಮಾನದವರಲ್ಲೂ ಈ ಸೋಂಕು ಹರಡುತ್ತದೆಯಾದರೂ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಸೋಂಕಿತನ ಜತೆ ಲೈಂಗಿಕ ಕ್ರಿಯೆ ನಡೆಸಿದರೂ ರೋಗ ಬರಬಹುದು. ಕೇರಳದಲ್ಲಿ ಈಗ ಸೋಂಕು ಖಚಿತಪಟ್ಟಿರುವ ಬಹುತೇಕ ಮಂದಿ ಸೋಂಕಿನಿಂದ ಮೃತಪಟ್ಟ11 ವರ್ಷದ ಬಾಲಕನ ಅಂತ್ಯಕ್ರಿಯೆಗೆ ಹೋಗಿದ್ದರು ಅಥವಾ ಆತನ ಮನೆಯಲ್ಲಿ ಆಹಾರ ಸೇವಿಸಿದ್ದರು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಹೊಸ ವೈರಸ್ ಭೀತಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಕೊಟ್ಟ ಖಡಕ್ ಸೂಚನೆಗಳಿವು....

ಲಕ್ಷಣ ಏನು?

ಅತಿಸಾರ ಭೇದಿ, ಜ್ವರ, ಹೊಟ್ಟೆನೋವು. ಕೆಲವರಲ್ಲಿ ಯಾವುದೇ ಲಕ್ಷಣ ಕಾಣದೆ ಇರಬಹುದು

ಚಿಕಿತ್ಸೆ ಏನು?

ಮಲ ಪರೀಕ್ಷೆ ಮೂಲಕ ಸೋಂಕು ಪತ್ತೆ. ಬಳಿಕ ಆ್ಯಂಟಿ ಬಯೋಟಿಕ್ಸ್‌ ಬಳಸಿ ಚಿಕಿತ್ಸೆ

ಹೇಗೆ ಹರಡುತ್ತೆ?

ಸೋಂಕಿತನ ವ್ಯಕ್ತಿ ಸಿದ್ಧಪಡಿಸಿದ ಆಹಾರ ಸೇವನೆ, ಬ್ಯಾಕ್ಟಿರಿಯಾ ಇರುವ ಪ್ರದೇಶವನ್ನು ಕೈಯಿಂದ ಮುಟ್ಟಿಅದೇ ಕೈಯನ್ನು ಬಾಯಿಗೆ ತಾಗಿಸಿದರೆ, ಸೋಂಕಿತರ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಹರಡುತ್ತೆ. ಕಲುಷಿತ ನೀರು, ಆಹಾರದಿಂದಲೂ ಬರುತ್ತೆ.

ರಾಜ್ಯದಲ್ಲಿ ನೈಟ್ ಕರ್ಫ್ಯೂ: ರಾತ್ರಿ ಪ್ರಯಾಣಿಕರಿಗೆ ಸವದಿ ವಿಶೇಷ ಮನವಿ

ತಡೆಯೋದು ಹೇಗೆ?

ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಕೈ ತೊಳೆದುಕೊಳ್ಳಬೇಕು. ಲಕ್ಷಣ ಕಂಡ ಬಂದ ತಕ್ಷಣ ವೈದ್ಯರನ್ನು ಕಾಣಬೇಕು.