ನವದೆಹಲಿ(ಫೆ.11): ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಆಡಳಿತಾರೂಢ ಆಪ್ ಮುನ್ನಡೆ ಕಾಯ್ದುಕೊಂಡಿದೆ. ಇದುವರೆಗೂ ಬಂದ ಅಂಕಿ ಅಂಶಗಳ ಪ್ರಕಾರ ಆಪ್ 59, ಬಿಜೆಪಿ 11, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.

ಇನ್ನು ದೆಹಲಿ ಸೋಲಿಗೆ ಕಾರಣ ತಿಳಿಸಿರುವ ಕಾಂಗ್ರೆಸ್ ನಾಯಕಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಗಳು ಶರ್ಮಿಷ್ಠ ಮುಖರ್ಜಿ, ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರ ಮಾಡುವುದರಲ್ಲಿ ಆದ ವಿಳಂಬವೇ ಈ ಶೂನ್ಯ ಫಲಿತಾಂಶಕ್ಕೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.

ಚುನಾವಣಾ ಸೋಲು: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಛೋಪ್ರಾ ರಾಜೀನಾಮೆ!

ಈ ಕುರಿತು ಟ್ವೀಟ್ ಮಾಡಿರುವ ಶರ್ಮಿಷ್ಠ ಮುಖರ್ಜಿ, ದೆಹಲಿಯಲ್ಲಿ ನಾವು ಮತ್ತೆ ನಾಶ ಹೊಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆತ್ಮಾವಲೋಕನ ಮಾಡಿಕೊಳ್ಳುವುದು ಸಾಕು, ಇನ್ನೇನಿದ್ದರೂ ಕಾರ್ಯಪ್ರವೃತ್ತವಾಗಬೇಕು ಎಂದು ಶರ್ಮಿಷ್ಠ ಮುಖರ್ಜಿ ಮಾರ್ಮಿಕವಾಗಿ ಹೇಳಿದ್ದಾರೆ.

ಕಾಂಗ್ರೆಸ್‌ನ್ನು ಕಂಗಾಲು ಮಾಡಿದ ದೆಹಲಿ: ಕೈ ಸೋಲಿಗೆ ಕಾರಣಗಳಿವೆ ಇಲ್ಲಿ!

ಉನ್ನತ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಅತಿಯಾದ ವಿಳಂಬ, ರಾಜ್ಯ ಮಟ್ಟದಲ್ಲಿ ಕಾರ್ಯತಂತ್ರದ ಮತ್ತು ಒಗ್ಗಟ್ಟಿನ ಕೊರತೆ, ನಿರುತ್ಸಾಹಿ ಕಾರ್ಯಕರ್ತರು, ಇವೆಲ್ಲವೂ ಚುನಾವಣಾ ಫಲಿತಾಂಶ ಸೋಲಿಗೆ ಕಾರಣ ಎಂದು ಶರ್ಮಿಷ್ಠ ಅಭಿಪ್ರಾಯಪಟ್ಟಿದ್ದಾರೆ.