ನವದೆಹಲಿ[ಫೆ.05]: ದಿಲ್ಲಿಯ ಶಾಹೀನ್‌ ಬಾಗ್‌ನಲ್ಲಿ ತಿಂಗಳಿಂದ ನಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲೆ ಗುಂಡು ಹಾರಿಸಿ ಬಂಧಿಯಾಗಿರುವ ಕಪಿಲ್‌ ಬೈಸಾಲಾ ಕಳೆದ ವರ್ಷ ಆಮ್‌ ಆದ್ಮಿ ಪಕ್ಷ (ಆಪ್‌) ಸೇರಿದ್ದ ಎಂಬ ವಿಷಯವನ್ನು ದಿಲ್ಲಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಇದರ ಬೆನ್ನಲ್ಲೇ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ದಿಲ್ಲಿಯಲ್ಲಿ ಆಪ್‌ ಹಾಗೂ ಬಿಜೆಪಿ ಮಧ್ಯೆ ವಾಕ್ಸಮರ ಆರಂಭವಾಗಿದೆ.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಡಿಸಿಪಿ (ಅಪರಾಧ) ರಾಜೇಶ್‌ ರಾವ್‌, ‘ಕಪಿಲ್‌ ಹಾಗೂ ಆತನ ಅಪ್ಪ 2019ರ ಆರಂಭದಲ್ಲಿ ಆಪ್‌ ಸೇರಿದ್ದರು. ಆತನ ಮೊಬೈಲ್‌ ಫೋನ್‌ ಹಾಗೂ ವಾಟ್ಸಪ್‌ ಡಾಟಾ, ಆತ ಆಪ್‌ ಸೇರುತ್ತಿರುವ ಫೋಟೋವನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದರು. ಫೋಟೋಗಳನ್ನು ಪೊಲೀಸರು ಮಾಧ್ಯಮಗಳಿಗೂ ಬಿಡುಗಡೆ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ‘ದೇಶದ ಭದ್ರತೆ ಜತೆ ಆಟವಾಡುತ್ತಿರುವ ಆಪ್‌ ನೇತಾರ ಅರವಿಂದ ಕೇಜ್ರಿವಾಲ್‌ಗೆ ದಿಲ್ಲಿ ಜನ ಪಾಠ ಕಲಿಸಲಿದ್ದಾರೆ’ ಎಂದಿದ್ದಾರೆ. ಆಪ್‌ ನೇತಾರ ಸಂಜಯ ಸಿಂಗ್‌ ಈ ಆರೋಪ ನಿರಾಕರಿಸಿ, ‘ಚುನಾವಣೆಗೆ 4 ದಿನ ಮುಂಚೆ ಪೊಲೀಸರು ಈ ಫೋಟೋ ಬಿಡುಗಡೆ ಮಾಡಿರುವ ಹಿಂದೆ ಬಿಜೆಪಿ ಕೊಳಕು ರಾಜಕೀಯವಿದೆ’ ಎಂದು ಆರೋಪಿಸಿದ್ದಾರೆ. ಡಿಸಿಪಿ ಮೇಲೆ ಕ್ರಮಕ್ಕೆ ಆಪ್‌ ಆಗ್ರಹಿಸಿದೆ.

ಇದೇ ವೇಳೆ, ಕಪಿಲ್‌ ಚಿಕ್ಕಪ್ಪ ಫತೇಶ್‌ ಸಿಂಗ್‌, ‘ಈ ಫೋಟೋಗಳು ಎಲ್ಲಿಂದ ಬಂದವು ಗೊತ್ತಿಲ್ಲ. ಕಪಿಲ್‌ಗೆ ಯಾವುದೇ ರಾಜಕೀಯ ನಂಟಿಲ್ಲ. ಕಪಿಲ್‌ ಅಪ್ಪ 2008ರಲ್ಲಿ ಬಿಎಸ್ಪಿಯಿಂದ ಚುನಾವಣೆಗೆ ನಿಂತು ಸೋತಿದ್ದರು. ಬಳಿಕ ಅವರ ಕುಟುಂಬ ರಾಜಕೀಯಕ್ಕೆ ಕಾಲಿಟ್ಟಿಲ್ಲ. ಆಪ್‌ನಲ್ಲಿ ಕಪಿಲ್‌ಗೆ ಯಾವುದೇ ಸ್ನೇಹಿತರಿಲ್ಲ’ ಎಂದಿದ್ದಾರೆ.