ಶ್ರೀನಗರ(ಫೆ.15): ಮಹತ್ವದ ಬೆಳವಣಿಗೆಯೊಂದರಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ)ಯಡಿ ಮಾಜಿ ಐಎಎಸ್ ಅಧಿಕಾರಿ ಹಾಗೂ ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ ಮುಖ್ಯಸ್ಥ ಶಾ ಫೈಸಲ್ ಅವರನ್ನು ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ತೀರ್ಮಾನವನ್ನು ಶಾ ಫೈಸಲ್ ವಿರೋಧಿಸಿದ್ದರು. ಅಲ್ಲದೇ ಈ ನಿರ್ಧಾರ ಪ್ರತ್ಯೇಕತಾವಾದಕ್ಕೆ ಇಂಬು ನೀಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಶಾ ಫೈಸಲ್ ಅವರನ್ನು ಪಿಎಸ್‌ಎ ಕಾಯ್ದೆಯಡಿ ಬಂಧಿಸಲಾಗಿದ್ದು, ಈ ಕಾಯ್ದೆಯಡಿ ಬಂಧಿಸಲ್ಪಟ್ಟಿರುವ ಕಣಿಯೆಯ ರಾಜಕೀಯ ನಾಯಕರ ಸಾಲಿಗೆ ಶಾ ಫೈಸಲ್ ಸೇರ್ಪಡೆಗೊಂಡಿದ್ದಾರೆ.

ಒಮರ್ ಬಂಧನ: ಕಣಿವೆ ಆಡಳಿತಕ್ಕೆ ಸುಪ್ರೀಂ ನೋಟಿಸ್!

ಕಣಿವೆಗೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಕಾಶ್ಮೀರದ ರಾಜಕೀಯ ಮುಖಂಡರಿಗೆ ಈಗ ಕೇವಲ ಎರಡು ಆಯ್ಕೆಗಳಿವೆ. ಮೊದಲನೆಯದು ಸರ್ಕಾರ ಪರವಾಗಿ ನಿಲ್ಲುವುದು ಇಲ್ಲ ಪ್ರತ್ಯೇಕತಾವಾದಿಗಳನ್ನು ಸೇರಿಕೊಳ್ಳುವುದು ಎಂದು ಫೈಸಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಶಾ ಫೈಸಲ್ 2010ರ ಯುಪಿಎಸ್’ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದು ಗಮನ ಸೆಳೆದಿದ್ದರು. ಐಎಎಸ್ ಅಧಿಕಾರಿಯಾಗಿದ್ದ ಶಾ ಫೈಸಲ್, ಬಳಿಕ ಸ್ವಯಂ ನಿವೃತ್ತಿ ಪಡೆದು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್  ಎಂಬ ಪಕ್ಷವನ್ನು ಸ್ಥಾಪಿಸಿದ್ದರು.

ಸದ್ಯ  ಪಿಎಸ್‌ಎ ಕಾಯ್ದೆಯಡಿ 300ಕ್ಕೂ ಹೆಚ್ಚು ನಾಯಕರನ್ನು ಬಂಧಿಸಲಾಗಿದ್ದು, ಈ ಪೈಕಿ ವಿಶೇಷ ಸ್ಥಾನಮಾನ ರದ್ದತಿ ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಟ್ಟ ಕೆಲ ನಾಯಕರನ್ನು ಬಿಡುಗಡೆ ಮಾಡಲಾಗಿದೆ.