Asianet Suvarna News Asianet Suvarna News

Centre to States: ಆಸ್ಪತ್ರೆ, ಆಕ್ಸಿಜನ್‌ ರೆಡಿ ಮಾಡಲು ರಾಜ್ಯಗಳಿಗೆ ಕೇಂದ್ರದಿಂದ ಪತ್ರ

  • ಕೋವಿಡ್‌ ಸೋಂಕು ದಿಢೀರ್‌ ಸ್ಫೋಟ ಹಿನ್ನೆಲೆ ಭರದ ಸಿದ್ಧತೆ
  • ವಿಶ್ವದಲ್ಲಿ ಕೋವಿಡ್‌ ವೇಗವಾಗಿ ಹಬ್ಬುತ್ತಿದೆ ಕೊರೋನಾ
  • ದೇಶದಲ್ಲಿ 4 ದಿನದಿಂದ ಭಾರೀ ಹೆಚ್ಚಳ
  • ಈ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಸನ್ನದ್ಧ ಸ್ಥಿತಿಯಲ್ಲಿರಿಸಲು ನಿರ್ದೇಶನ
Set up makeshift hospitals Centre to states as Covid cases surge dpl
Author
Bangalore, First Published Jan 2, 2022, 5:30 AM IST
  • Facebook
  • Twitter
  • Whatsapp

ನವದೆಹಲಿ(ಜ.02): ದೇಶದಲ್ಲಿ ಹೊಸದಾಗಿ 161 ಒಮಿಕ್ರೋನ್‌ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಒಮಿಕ್ರೋನ್‌(Omicron) ಪ್ರಕರಣಗಳ ಸಂಖ್ಯೆ 1431ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ಶನಿವಾರ ತಿಳಿಸಿದೆ. ದೇಶ ಸಂಭವನೀಯ 3ನೇ ಅಲೆಯತ್ತ ಹೆಜ್ಜೆ ಇಡುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರಗಳಿಗೆ(State Govt) ಹೈಅಲರ್ಟ್‌ ರವಾನಿಸಿರುವ ಕೇಂದ್ರ ಸರ್ಕಾರ ಸಂಭವನೀಯ ಭಾರೀ ಸೋಂಕು ಏರಿಕೆ ನಿರ್ವಹಣೆಯ ನಿಟ್ಟಿನಲ್ಲಿ ಅಗತ್ಯ ಆರೋಗ್ಯ ಮೂಲಸೌಕರ್ಯವನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದೆ. ದೇಶಾದ್ಯಂತ ಏಕಾಏಕಿ ಹೊಸ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯದ ಮೇಲೆ ಭಾರೀ ಒತ್ತಡ ಬೀಳುವ ಸಾಧ್ಯತೆ ಇದೆ. ಹೀಗಾಗಿ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳುವುದು ಅತ್ಯಂತ ಮಹತ್ವದ್ದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.

ಈ ಕುರಿತು ಶನಿವಾರ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ರವಾನಿಸಿರುವ ಕೇಂದ್ರ ಆರೋಗ್ಯ ಸಚಿವಾಲಯದ ಮುಖ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ‘ದೇಶಾದ್ಯಂತ ಹೊಸ ಕೋವಿಡ್‌ ಪ್ರಕರಣಗಳಲ್ಲಿ ಏಕಾಏಕಿ ಏರಿಕೆ ಕಂಡುಬರುತ್ತಿದೆ. ಇದು ಮುಂದಿನ ದಿನಗಳಲ್ಲಿ ಆರೋಗ್ಯ ಮೂಲಸೌಕರ್ಯದ ಮೇಲಿನ ಒತ್ತಡ ಹೆಚ್ಚಿಸಲಿದೆ. ಹೀಗಾಗಿ ಈ ಪರಿಸ್ಥಿತಿ ಎದುರಿಸಲು ಎಲ್ಲಾ ರಾಜ್ಯಗಳು ಅಗತ್ಯಪ್ರಮಾಣದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸುವ ಮೂಲಕ ಅಗತ್ಯ ಆರೋಗ್ಯ ಮೂಲಸೌಕರ್ಯ ಸಿದ್ಧಪಡಿಸಿಟ್ಟುಕೊಳ್ಳಬೇಕು. ಡಿಆರ್‌ಡಿಒ, ಸಿಎಸ್‌ಐಆರ್‌, ಖಾಸಗಿ ವಲಯ, ಸ್ಥಳಿಯ ಸಂಸ್ಥೆಗಳು, ಎನ್‌ಜಿಒಗಳ ನೆರವು ಪಡೆಯುವ ಮೂಲಕ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣವನ್ನು ತ್ವರಿತಗೊಳಿಸಬಹುದಾಗಿದೆ’ ಎಂದು ಸಲಹೆ ನೀಡಿದ್ದಾರೆ.

ಮಂಡ್ಯದಲ್ಲಿ ಮತ್ತೆ ಕೊರೋನಾ ಅಟ್ಟಹಾಸ: ನಾಲ್ವರಿಗೆ ಸೋಂಕು

ಇದರ ಜೊತೆಗೆ ‘ಹೋಟೆಲ್‌ ಕೊಠಡಿಗಳು, ಕೋವಿಡ್‌ಗೆಂದೆ ಮೀಸಲಿರಿಸಿದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಇತರೆ ಬೆಡ್‌ಗಳನ್ನು ಸೌಮ್ಯ ಸ್ವರೂಪದ ಸೋಂಕಿತರ ಚಿಕಿತ್ಸೆಗಾಗಿ ಬಳಸಿಕೊಳ್ಳಬಹುದು. ಈ ಬಾರಿ ಹೆಚ್ಚಿನ ಪ್ರಮಾಣದ ಸೋಂಕಿತರು ಹೋಮ್‌ ಐಸೋಲೇಷನ್‌ಗೆ ಸೀಮಿತವಾಗಬಹುದು. ಹೀಗಾಗಿ ಇಂಥ ಪ್ರಕರಣಗಳ ಮೇಲೆ ನಿಗಾ ಇಡಲು ಮತ್ತುಒಂದು ವೇಳೆ ಇಂಥ ಸೋಂಕಿತರ ಆರೋಗ್ಯ ಹದಗೆಟ್ಟಲ್ಲಿ, ತಕ್ಷಣವೇ ಅವರನ್ನು ಸಮೀಪದ ಚಿಕಿತ್ಸಾ ಕೇಂದ್ರಕ್ಕೆ ರವಾನಿಸಲು ಸ್ಪಷ್ಟವಾದ ವ್ಯವಸ್ಥೆ ರೂಪಿಸಬೇಕು. ಈ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗುವುದನ್ನು ನೋಡಲು ವಿಶೇಷ ತಂಡಗಳನ್ನು ರಚಿಸಬೇಕು. ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆಂದೇ ಪ್ರತ್ಯೇಕ ಕಾಲ್‌ಸೆಂಟರ್‌/ ಕಂಟ್ರೋಲ್‌ ರೂಂ ರಚಿಸಬೇಕು. ಇವುಗಳ ಮೂಲಕ ಸೋಂಕಿತರಿಗೆ ಎಲ್ಲಾ ಅಗತ್ಯ ನೆರವು ಕಲ್ಪಿಸಬೇಕು. ಹೋಂ ಐಸೋಲೇಷನ್‌ನಲ್ಲಿ ಇರುವ ವ್ಯಕ್ತಿಗಳು ಕರೆ ಮಾಡಿದರೆ ಮನೆ ಬಾಗಿಲಿಗೆ ಬಂದು ಕರೆದೊಯ್ಯುವ ಅ್ಯಂಬುಲೆನ್ಸ್‌ ವ್ಯವಸ್ಥೆಯನ್ನು ಪಾರದರ್ಶಕವಾಗಿ ರೂಪಿಸಬೇಕು.

ಗ್ರಾಮ, ಮಕ್ಕಳ ಮೇಲೆ ನಿಗಾ:

ಇವುಗಳ ಜೊತೆಗೆ ಈಗಾಗಲೇ ಕೋವಿಡ್‌ ಸೋಂಕಿತರಿಗೆಂದೇ ಇರುವ ವಿಶೇಷ ಆಸ್ಪತ್ರೆಗಳಲ್ಲಿ ಎಲ್ಲಾ ಆರೋಗ್ಯ ಮೂಲಸೌಕರ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಗ್ರಾಮೀಣ ಭಾಗಗಳು ಮತ್ತು ಮಕ್ಕಳ ಸೋಂಕಿನ ಪ್ರಕರಣಗಳಿಗೆ ವಿಶೇಷ ಗಮನ ನೀಡಬೇಕು. ಆಕ್ಸಿಜನ್‌, ಔಷಧ, ಸಾರಿಗೆ ವ್ಯವಸ್ಥೆ ಎಲ್ಲಾ ಸಂದರ್ಭಗಳಲ್ಲೂ ಲಭ್ಯವಿರುವಂತೆ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು. ಸೋಂಕು ಹಬ್ಬದಂತೆ ನೋಡಿಕೊಳ್ಳಲು ಕೋವಿಡ್‌ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಸೋಂಕಿತರು, ಸೋಂಕಿತರ ಸಂಪರ್ಕಕ್ಕೆ ಬರುವವರ ತಪಾಸಣೆಯನ್ನು ಶೀಘ್ರ ಮತ್ತು ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸಬೇಕು ಎಂದು ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

ಏನೇನು ಸೂಚನೆ?

1. ಕೋವಿಡ್‌ ಸೋಂಕಿನಿಂದ ಅನಾರೋಗ್ಯಪೀಡಿತರಾದವರ ಚಿಕಿತ್ಸೆಗಾಗಿ ಆಸ್ಪತ್ರೆಗಳು, ಆಕ್ಸಿಜನ್‌ ಲಭ್ಯತೆ ಇರುವಂತೆ ನೋಡಿಕೊಳ್ಳಿ

2. ಸೌಮ್ಯ ಲಕ್ಷಣ ಇರುವವರಿಗಾಗಿ ತಾತ್ಕಾಲಿಕ ಆಸ್ಪತ್ರೆ ಸಿದ್ಧಪಡಿಸಿ. ಕ್ವಾರಂಟೈನ್‌ಗೆ ಒಳಪಡಿಸಲು ಹೋಟೆಲ್‌ ರೂಮ್‌ ಬಳಸಿಕೊಳ್ಳಿ

3. ಹೋಂ ಕ್ವಾರಂಟೈನ್‌ನಲ್ಲಿ ಇರುವವರಿಗೆ ನೆರವಾಗಲು ವೈದ್ಯಕೀಯ ತಂಡ, ಕಾಲ್‌ಸೆಂಟರ್‌, ಕಂಟ್ರೋಲ್‌ ರೂಮ್‌ ಸಿದ್ಧಪಡಿಸಿ

4. ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಿ

5. ಮಕ್ಕಳಿಗೆ ಸೋಂಕು ತಗಲಿದರೆ ತಕ್ಷಣ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಿ. ಗ್ರಾಮೀಣ ಭಾಗದವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಿ

Follow Us:
Download App:
  • android
  • ios