ನವದೆಹಲಿ(ಜ.06): ಕೊರೋನಾ ಲಸಿಕೆ ಹಂಚಿಕೆಯ ಅನುಮತಿ ಗಿಟ್ಟಿಸಿಕೊಂಡ ಬೆನ್ನಲ್ಲೇ ಪರಸ್ಪರ ವಾಕ್ಸಮರಕ್ಕೆ ಇಳಿದಿದ್ದ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಹಾಗೂ ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಕಂಪನಿಗಳು ಮಂಗಳವಾರ ‘ಕದನ ವಿರಾಮ’ ಘೋಷಿಸಿವೆ. ‘ಎರಡೂ ಕಂಪನಿಗಳು ಕೋವಿಡ್‌-19 ಲಸಿಕೆಗಳನ್ನು ಅಭಿವೃದ್ಧಿಪಡಿಸಿ ಉತ್ಪಾದಿಸಲು ಒಟ್ಟಾಗಿ ಕೆಲಸ ಮಾಡಲಿವೆ’ ಎಂದು ಜಂಟಿಯಾಗಿ ಪ್ರಕಟಿಸಿವೆ.

‘ಜಗತ್ತಿನಲ್ಲಿ ಮಾಡೆರ್ನಾ, ಫೈಜರ್‌ ಹಾಗೂ ನಮ್ಮ ಸಹಭಾಗಿತ್ವದ ಆಕ್ಸ್‌ಫರ್ಡ್‌ ಕೋವಿಶೀಲ್ಡ್‌ ಲಸಿಕೆ ಹೊರತುಪಡಿಸಿದರೆ ಉಳಿದೆಲ್ಲ ಲಸಿಕೆಗಳು ನೀರು ಇದ್ದಂತೆ’ ಎಂದು ಸೀರಂ ಇನ್ಸ್‌ಟಿಟ್ಯೂಟ್‌ ಮುಖ್ಯಸ್ಥ ಅದರ್‌ ಪೂನಾವಾಲಾ ಭಾನುವಾರ ವ್ಯಂಗ್ಯವಾಡಿದ್ದರು. ಇದಕ್ಕೆ ಸೋಮವಾರ ತಿರುಗೇಟು ನೀಡಿದ್ದ ಭಾರತ್‌ ಬಯೋಟೆಕ್‌ ಸಂಸ್ಥಾಪಕ ಕೃಷ್ಣ ಎಲ್ಲಾ, ‘ನಮ್ಮ ಲಸಿಕೆ ಫೈಝರ್‌ನಷ್ಟೇ ಕ್ಷಮತೆ ಹೊಂದಿದೆ. ಆದರೆ ನೀರು ಎಂಬ ಮೂದಲಿಕೆಯಿಂದ ನೋವು ಉಂಟಾಗಿದೆ. ಕೇವಲ ಬ್ರಿಟನ್‌ನಲ್ಲಿ ಪ್ರಯೋಗಗೊಂಡ ಲಸಿಕೆಗೆ ಭಾರತದಲ್ಲಿ ಏಕೆ ಅನುಮತಿ?’ ಪೂನಾವಾಲಾಗೆ ತಿರುಗೇಟು ನೀಡಿದ್ದರು.

ಈ ವಾಕ್ಸಮರ ದೇಶದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಉಭಯ ಕಂಪನಿಗಳು ಮಂಗಳವಾರ ಒಮ್ಮತಕ್ಕೆ ಬಂದಿವೆ. ಪೂನಾವಾಲಾ ಹಾಗೂ ಕೃಷ್ಣ ಎಲ್ಲಾ ಅವರ ಪರವಾಗಿ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ‘ಲಸಿಕೆ ಅಭಿವೃದ್ಧಿ, ಉತ್ಪಾದನೆ ಹಾಗೂ ಪೂರೈಕೆಯಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದೇವೆ. ಭಾರತ ಹಾಗೂ ವಿಶ್ವದ ಇತರ ಕಡೆ ಜನರ ಜೀವ ಉಳಿಸುವುದು ಮುಖ್ಯ. ಜನರ ಜೀವ ಉಳಿಸಿ ಹಳಿ ತಪ್ಪಿದ ಆರ್ಥಿಕತೆಯನ್ನು ಸರಿ ಮಾಡುವ ಶಕ್ತಿ ಲಸಿಕೆಗೆ ಇದೆ. ಜಗತ್ತಿನಾದ್ಯಂತ ನಮ್ಮ ಲಸಿಕೆಗಳು ಲಭಿಸುವಂತಾಗಲು ಶಪಥ ಮಾಡಲಿದ್ದೇವೆ’ ಎಂದಿದ್ದಾರೆ.