ಶ್ರೀನಗರ(ಜೂ.30): ಕಾಶ್ಮೀರದಲ್ಲಿ ಪ್ರತ್ಯೇಕತಾವಾದಕ್ಕೆ ಸೋಮವಾರ ದೊಡ್ಡ ಹಿನ್ನಡೆಯಾಗಿದೆ. ತಾವೇ 2003ನೇ ಸ್ಥಾಪಿಸಿದ್ದ ಹುರಿಯತ್‌ ಕಾನ್ಫರೆನ್ಸ್‌ ಪ್ರತ್ಯೇಕತಾವಾದಿ ಸಂಘಟನೆಯಿಂದ ದೂರ ಸರಿಯಲು ಸದಾ ಪಾಕಿಸ್ತಾನ ಪರ ಧ್ವನಿ ಎತ್ತುವ ಸಯ್ಯದ್‌ ಅಲಿಶಾ ಗಿಲಾನಿ ನಿರ್ಧರಿಸಿದ್ದಾರೆ. ಇದರೊಂದಿಗೆ ಈಗಾಗಲೇ ಹಲವು ಬಾರಿ ಹೋಳಾಗಿದ್ದ ಸಂಘಟನೆ ಮತ್ತೊಂದು ಹೋಳಾಗಿದೆ.

ಈ ಕುರಿತು ಮಾಧ್ಯಮಗಳಿಗೆ 4 ಸಾಲಿನ ಪತ್ರ ಹಾಗೂ ಆಡಿಯೋ ಸಂದೇಶ ಬಿಡುಗಡೆ ಮಾಡಿರುವ 90ರ ಹರೆಯದ ಗಿಲಾನಿ ಅವರ ವಕ್ತಾರರು, ‘ಹುರಿಯತ್‌ ಕಾನ್ಫರೆನ್ಸ್‌ ಸಂಘಟನೆಯಿಂದ ಸಂಪೂರ್ಣ ದೂರವಾಗುವುದಾಗಿ ಗಿಲಾನಿ ಘೋಷಿಸಿದ್ದಾರೆ. ಈ ಸಂಬಂಧ ತಮ್ಮ ಪಕ್ಷದ ಮುಖಂಡರಿಗೆ ಪತ್ರ ಬರೆದಿರುವ ಅವರು, ಹುರಿಯತ್‌ ಬಿಡುವ ಕಾರಣ ವಿವರಿಸಿದ್ದಾರೆ’ ಎಂದು ಹೇಳಿದ್ದಾರೆ. ಗಿಲಾನಿ ಅವರು ಹುರಿಯತ್‌ನ ಆಜೀವ ಅಧ್ಯಕ್ಷರಾಗಿದ್ದರು.

ಖಚಿತ ಮಾಹಿತಿ ಮೇರೆ ದಾಳಿ; ಮೂವರು ಉಗ್ರರ ಸದ್ದಡಗಿಸಿದ ಸೇನೆ!

ಹುರಿಯತ್‌ ನಾಯಕರಿಗೆ 2 ಪುಟದ ಪತ್ರ ಬರೆದಿರುವ ಗಿಲಾನಿ, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಹುರಿಯತ್‌ ಸದಸ್ಯರ ಮೇಲೆ ನಾನಾ ಆರೋಪಗಳು ಕೇಳಿಬಂದಿದ್ದು, ತನಿಖೆ ನಡೆದಿದೆ. ಹೀಗಾಗಿ ಅವರ ಅಧಿಕಾರ ಮೊಟಕಾಗಿದೆ ಹಾಗೂ ಒಡಕು ಸೃಷ್ಟಿಆಗಿದೆ. ಇನ್ನು ಜಮ್ಮು-ಕಾಶ್ಮೀರದ ಮೇಲೆ ಕೇಂದ್ರಾಡಳಿತ ಸ್ಥಾನಮಾನ ಹೇರಿದಾಗ ಹಾಗೂ ಪ್ರತ್ಯೇಕ ಲಡಾಖ್‌ ಸೃಷ್ಟಿಸಿದಾಗ ನೀವು (ಹುರಿಯತ್‌ ನಾಯಕರು) ಸೂಕ್ತ ಪ್ರತಿಭಟನೆ ನಡೆಸಲಿಲ್ಲ. ಹೀಗಾಗಿ ಇದರ ತೂಗುಕತ್ತಿ ನಿಮ್ಮ ಮೇಲೇ ತೂಗುತ್ತಿದೆ’ ಎಂದು ಕಿಡಿಕಾರಿದ್ದಾರೆ.

‘2003ರಲ್ಲಿ ನೀವೇ ನನ್ನನ್ನು ಆಜೀವ ಅಧ್ಯಕ್ಷರನ್ನಾಗಿ ಮಾಡಿದಿರಿ. ಆದರೆ ಈಗನ ನೀವು ಹದ್ದು ಮೀರಿದ್ದು, ನನ್ನ ವಿರುದ್ಧವೇ ಬಂಡಾಯ ಚಟುವಟಿಕೆ ನಡೆಯುತ್ತಿವೆ’ ಎಂದು ಸ್ವಪಕ್ಷೀಯರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುಲ್ವಾಮದಲ್ಲಿ ಮೂವರು ಉಗ್ರರ ಹತ್ಯೆ, ತಪ್ಪಿತು ಮತ್ತೊಂದು ದುರಂತ!

ಉಗ್ರವಾದಕ್ಕೆ ಗಿಲಾನಿ ಪೋಷಣೆ:

ಗಿಲಾನಿ ಕಾಶ್ಮೀರದ ಪ್ರಮುಖ ಪ್ರತ್ಯೇಕತಾವಾದಿ ನಾಯಕ. ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗಬೇಕು ಎಂಬುದೇಇದರ ಧ್ಯೇಯ. ಹುರಿಯತ್‌ ಹೆಸರಿನ ವಿವಿಧ ಪಕ್ಷಗಳ ಸಮೂಹದ ಅಧ್ಯಕ್ಷರಾಗಿದ್ದ ಅವರ ಮೇಲೆ ಕಾಶ್ಮೀರದಲ್ಲಿ ಉಗ್ರವಾದಕ್ಕೆ ಕುಮ್ಮಕ್ಕು ನೀಡಿದ ಆರೋಪವಿದೆ.