ಎನ್‌ಎಸ್‌ಜಿಗೆ ಕನ್ನಡಿಗ ಗಣಪತಿ ಈಗ ಮುಖ್ಯಸ್ಥ| ಕೊಡಗಿನ ಐಪಿಎಸ್‌ ಅಧಿಕಾರಿಗೆ ಉನ್ನತ ಹುದ್ದೆ| ಕೇಂದ್ರ ಸಿಬ್ಬಂದಿ ಸಚಿವಾಲಯದಿಂದ ಆದೇಶ

ನವದೆಹಲಿ(ಮಾ.17): ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ದಳ) ಮುಖ್ಯಸ್ಥರಾಗಿ ಕೊಡಗು ಮೂಲದ ಐಪಿಎಸ್‌ ಅಧಿಕಾರಿ ಎಂ.ಎ. ಗಣಪತಿ ಮಂಗಳವಾರ ನೇಮಕವಾಗಿದ್ದಾರೆ. ಈ ಪ್ರತಿಷ್ಠಿತ ಹುದ್ದೆಯನ್ನು ಕನ್ನಡಿಗರೊಬ್ಬರು ಅಲಂಕರಿಸಿದ್ದು ಹೆಮ್ಮೆಯ ವಿಚಾರವಾಗಿದೆ.

ಗಣಪತಿ ಅವರ ನೇಮಕದ ಬಗ್ಗೆ ಕೇಂದ್ರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದ್ದು, 2024ರ ಫೆಬ್ರವರಿ 29ರವರೆಗೆ ಅವರು ಈ ಹುದ್ದೆ ಅಲಂಕರಿಸಲಿದ್ದಾರೆ ಎಂದು ತಿಳಿಸಿದೆ.

ಭಯೋತ್ಪಾದಕ ನಿಗ್ರಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಎನ್‌ಎಸ್‌ಜಿ ಮಹಾನಿರ್ದೇಶಕ ಹುದ್ದೆಯು ಸೇನೆಯ ಲೆಫ್ಟಿನೆಂಟ್‌ ಜನರಲ್‌, ವಾಯುಪಡೆಯ ಏರ್‌ ಮಾರ್ಷಲ್‌ ಹಾಗೂ ನೌಕಾಪಡೆಯ ವೈಸ್‌ ಅಡ್ಮಿರಲ್‌ ಹುದ್ದೆಗೆ ಸಮ.

ಇದೇ ವೇಳೆ, ಸಿಆರ್‌ಪಿಎಫ್‌ ಮುಖ್ಯಸ್ಥರಾಗಿ ಕುಲದೀಪ್‌ ಸಿಂಗ್‌ ಅವರನ್ನು ನೇಮಿಸಲಾಗಿದೆ.

ಏನಿದು ಎನ್‌ಎಸ್‌ಜಿ?:

ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ)- ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಭಯೋತ್ಪಾದಕ ನಿಗ್ರಹ ಪಡೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಹಾಗೂ ಆಪರೇಶನ್‌ ಬ್ಲೂಸ್ಟಾರ್‌ ಬಳಿಕ 1986ರಲ್ಲಿ ಇದರ ಸ್ಥಾಪನೆಯಾಯಿತು. ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿ ಸಂಭವಿಸಿದಾಗ ಪಾಕಿಸ್ತಾನಿ ಉಗ್ರರ ಹುಟ್ಟಡಗಿಸಿದ್ದು ಇದೇ ಪಡೆ.

ಯಾರು ಗಣಪತಿ?

ಕೊಡಗು ಮೂಲದ ಎಂ.ಎ. ಗಣಪತಿ 1986ರ ಬ್ಯಾಚ್‌ನ ಉತ್ತರಾಖಂಡ ಕೇಡರ್‌ ಐಪಿಎಸ್‌ ಅಧಿಕಾರಿ. ಅವರು ಈಗ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಮುಖ್ಯಸ್ಥರಾಗಿದ್ದಾರೆ. ಕೇಂದ್ರ ಗೃಹ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಇವರು, ಸಚಿವಾಲಯದ ವಕ್ತಾರರಾಗಿದ್ದರು. ಉತ್ತರಾಖಂಡ ಡಿಜಿಪಿ ಕೂಡ ಆಗಿದ್ದ ಅವರು, ರಾಷ್ಟ್ರಪತಿ ಪದಕ ವಿಜೇತರೂ ಹೌದು.