ಬುಂದೇಲ್‌ಖಂಡ್(ಆ.29): ಆಧುನಿಕ ಭಾರತದಲ್ಲಿ ಕೃಷಿಗೆ ಆಧುನಿಕ ತಂತ್ರಜ್ಞಾನ, ಹಾಗೂ ಟೆಕ್ನಾಲಜಿ ಬಳಕೆ ಮಾಡಿ ಹೆಚ್ಚಿನ ಇಳುವರಿ ಪಡೆಯುವ ಕುರಿತು ಯುವ ಕೃಷಿ ವಿದ್ಯಾರ್ಥಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.  ಕೇಂದ್ರ ಕೃಷಿ ವಿಶ್ವವಿದ್ಯಾಲಯಕ್ಕೆ ಹೊಸದಾಗಿ ಕಟ್ಟಲಾದ ಜಾನ್ಸಿ ರಾಣಿ ಲಕ್ಷ್ಮೀ ಭಾಯಿ ಕಟ್ಟಡ ಉದ್ಘಾಟನೆ ಮಾಡಿ ಮೋದಿ, ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದರು.

ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ಗಡಿ ಭಾಗದ ಬುಂದೇಲ್‌ಖಂಡ್ ವಲಯದಲ್ಲಿ ಕೇಂದ್ರ ಕೃಷಿ ವಿಶ್ವವಿದ್ಯಾಲಯಕ್ಕೆ ಕಟ್ಟಲಾದ ಹೊಸ ಕಟ್ಟಡ ವಿದ್ಯಾರ್ಥಿಗಳಿಗೆ ಕಲಿಕೆಯ ವಿಸ್ತಾರವನ್ನು ಹೇಳುತ್ತದೆ. ಕಡಿಮೆ ಬೆಲೆಯಲ್ಲಿ ಹಲವು ತಂತ್ರಜ್ಞಾನಗಳು  ಲಭ್ಯವಿದೆ. ಮಳೆ ನೀರು ಕೊಯ್ಲು, ಹನಿ ನೀರಾವರಿ ಸೇರಿದಂತೆ ಹಲವು ಸುಲಭ ಹಾಗೂ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಿ ಹೆಚ್ಚಿನ ಇಳವರಿ ಹಾಗೂ ಆದಾಯ ಪಡೆಯುವತ್ತ ಮುನ್ನಡೆಯಬೇಕು ಎಂದು ಮೋದಿ ಹೇಳಿದರು.

ರೈತ ಕೇವಲ ಆಹಾರ ಉತ್ಪನ್ನಗಳ ಉತ್ಪಾದಕ ಮಾತ್ರವಲ್ಲ, ಜೊತೆಗೆ ಉದ್ಯಮಿಯನ್ನಾಗಿ ಮಾಡಬೇಕಿದೆ. ರೈತನ ಕೈಗಳನ್ನು ಬಲಪಡಿಸಬೇಕಿದೆ. ಟೆಕ್ನಾಲಜಿಗಳನ್ನು ಬಳಸಿಕೊಂಡು, ಕೃಷಿಯಲ್ಲಿ ತೊಡಗುವ ರೈತ, ಹಲವರಿಗೆ ಉದ್ಯೋಗವನ್ನು ನೀಡುತ್ತಾರೆ. ಇಳುವರಿ ಜೊತೆಗೆ ಆದಾಯವನ್ನು ಪಡೆಯುತ್ತಾರೆ ಎಂದು ಮೋದಿ ಹೇಳಿದ್ದಾರೆ.

6 ವರ್ಷಗಳ ಹಿಂದೆ ದೇಶದಲ್ಲಿ ಒಂದೇ ಕೇಂದ್ರ ಕೃಷಿ ವಿಶ್ವವಿದ್ಯಾಲಯವಿತ್ತು. ಇದೀಗ 3 ಕೃಷಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆ 3 ಶೈಕ್ಷಣಿಗ ಫಾರ್ಮಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಗರೀಬ್ ಕಲ್ಯಾಣ್ ಯೋಜನೆಯಡಿ 700 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹಲವರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.