6 ದಶಕ ಗುಹೆಯಲ್ಲಿದ್ದ ಸಾಧು, ರಾಮ ಮಂದಿರ ನಿರ್ಮಾಣಕ್ಕೆ ಕೊಟ್ರು 1 ಕೋಟಿ ದೇಣಿಗೆ!
ರಾಮ ಮಂದಿರ ನಿರ್ಮಾಣಕ್ಕೆ ಸ್ವಾಮೀಜಿ ದೇಣಿಗೆ| ಒಂದು ಕೋಟಿ ದೇಣಿಗೆ ನೀಡಿದ್ರು 6 ದಶಕ ಗುಹೆಯಲ್ಲಿದ್ದ ಹಿರಿಯ ಸಾಧು| ಇಲ್ಲಿದೆ ನೋಡಿ ಸಾಧುವಿನ ಸರಳತೆಯ ಕತೆ
ರಿಷಿಕೇಶ(ಜ.30): ಸ್ವಾಮಿ ಶಂಕರ್ ದಾಸ್, ಸುಮಾರು 60 ವರ್ಷಗಳಿಂದ ಗುಹೆಯಲ್ಲಿದ್ದ ರಿಷಿಕೇಶದ ಈ ಹಿರಿಯ ಸಾಧು ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ಮಂದಿರ ನಿರ್ಮಾಣಕ್ಕೆ ಬರೋಬ್ಬರಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಗುರು ಟಾತ್ ವೇಲ್ ಬಾಬಾ ಗುಹೆಯಲ್ಲಿದ್ದ ತಮ್ಮನ್ನು ಭೇಟಿಯಾಗಲು ಬರುತ್ತಿದ್ದ ಭಕ್ತರು ದೇಣಿಗೆ ರೂಪದಲ್ಲಿ ನೀಡುತ್ತಿದ್ದ ಹಣವನ್ನು ಸಂಗ್ರಹಿಸಿ ರಾಮ ಮಂದಿರ ನಿರ್ಮಾಣಕ್ಕೆ ನೀಡುತ್ತಿದ್ದೇನೆಂದು ದಾಸ್ ತಿಳಿಸಿದ್ದಾರೆ.
ಇನ್ನು ಈ ಹಿರಿಯ ಸಾಧು ದೇಣಿಗೆಯಾಗಿ ಇಷ್ಟು ದೊಡ್ಡ ಮೊತ್ತದ ಚೆಕ್ ನೀಡಿದಾಗ ರಿಷಿಕೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಇದನ್ನು ನಂಬಲಾಗದ ಅವರು ಕೂಡಲೇ ಅಕೌಂಟ್‌ನಲ್ಲಿ ಇಷ್ಟು ಮೊತ್ತವಿದೆಯೇ ಎಂದು ಪರಿಶೀಲಿಸಿದ್ದಾರೆ. ಅಕವಂಟ್‌ನಲ್ಲಿ ಸಾಕಷ್ಟು ಮೊತ್ತವಿದೆ ಎಂದು ಖಾತ್ರಿಯಾದ ಬಳಿಕವೇ ಆರ್‌ಎಸ್‌ಎಸ್ ಸದಸ್ಯರನ್ನು ಕರೆದು ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್‌ನ ಸುದಾಮ ಸಿಂಘಲ್ 'ಸ್ವಾಮಿಬ ಶಂಕರ್ ದಾಸ್‌ರವರು ರಾಮ ಮಂದಿರ ಟ್ರಸ್ಟ್‌ಗೆ ದೇಣಿಗೆ ನೀಡಲಿಚ್ಛಿಸಿದ್ದಾರೆಂಬ ಮಾಹಿತಿ ಮೇರೆಗೆ ನಾವು ಬ್ಯಾಂಕ್‌ಗೆ ತೆರಳಿದೆವು. ಈ ಮೊತ್ತವನ್ನು ನೇರವಾಗಿ ನೀಡಲಾಗದ ಕಾರಣ ಅವರು ಚೆಕ್ ನೀಡಿದ್ದಾರೆ. ಪ್ರತಿಯಾಗಿ ನಾವು ರಶೀದಿಯನ್ನೂ ನೀಡಿದ್ದೇವೆ. ಈ ಚೆಕ್ ಬಳಸಿ ಬ್ಯಾಂಕ್ ಮ್ಯಾನೇಜರ್ ಟ್ರಸ್ಟ್‌ನ ಖಾತೆಗೆ ಈ ಹಣವನ್ನು ವರ್ಗಾಯಿಸುತ್ತಾರೆ' ಎಂದಿದ್ದಾರೆ.
ದಾಸ್ ತಾವು ಕೊಟ್ಟ ದೇಣಿಗೆ ಬಗ್ಗೆ ಬಹಿರಂಗಪಡಿಸದಂತೆ ಮನವಿ ಮಾಡಿದ್ದರು. ಆದರೆ ರಾಮ ಮಂದಿರಕ್ಕೆ ದೇಣಿಗೆ ನೀಡಲು ಇತರರಿಗೂ ಪ್ರೇರಣೆಯಾಗಲಿ ಎಂಬ ನಿಟ್ಟಿನಲ್ಲಿ ಇವರ ಕತೆಯನ್ನು ವೈರಲ್ ಆಗಿದೆ. ಸ್ಥಳೀಯ ಮಟ್ಟದಲ್ಲಿ 'ಫಕ್ಕಡ್ ಬಾಬಾ' ಎಂದೇ ಕರೆಯಲಾಗುವ ದಾಸ್‌ರವರು ರಿಷಿಕೇಶದಲ್ಲಿ ವಾಸಿಸುತ್ತಾರೆ. ಭಕ್ತರ ದೇಣಿಗೆಯಿಂದ ಜೀವನ ಸಾಗಿಸುವ ಇವರು ಹಸಿದವರಿಗೆ ಆಹಾರ ದಾನ ಮಾಡುತ್ತಾರೆ.